ಗುರಿ ಸಾಧನೆಯೆಡೆಗೆ ಗಮನವಿರಲಿ : ಪ್ರಶಾಂತ ನೆಲವಿಗಿ

0
Farewell program for students at BCN Graduate College
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ವಿದ್ಯಾರ್ಥಿಗಳು ಉನ್ನತ ಗುರಿ ಹೊಂದಿದಲ್ಲಿ ಸಾಧನೆ ಸಾಧ್ಯ. ಪ್ರಾಪಂಚಿಕ ಜ್ಞಾನ ಹಾಗೂ ಕೌಶಲ್ಯಗಳನ್ನು ರೂಢಿಸಿಕೊಳ್ಳುವ ಮೂಲಕ ದೇಶವನ್ನು ಕಟ್ಟುವ ಕೆಲಸದಲ್ಲಿ ಸಹಕಾರಿಯಾದಲ್ಲಿ ಮಾತ್ರ ವಿದ್ಯಾರ್ಥಿಗಳು ಪಡೆದ ಪದವಿಗಳಿಗೆ ಇನ್ನೂ ಹೆಚ್ಚಿನ ಮೆರಗು ಸಿಗಲಿದೆ. ಎಂದು ಬಿಸಿಎನ್ ವಿದ್ಯಾಸಂಸ್ಥೆಯ ನಿರ್ದೇಶಕ ಪ್ರಶಾಂತ ನೆಲವಿಗಿ ಹೇಳಿದರು.

Advertisement

ಅವರು ಪಟ್ಟಣದ ಬಿಸಿಎನ್ ಪದವಿ ಕಾಲೇಜಿನ ಸಭಾಂಗಣದಲ್ಲಿ ಬಿಸಿಎನ್ ವಿಜ್ಞಾನ, ವಾಣಿಜ್ಯ ಪದವಿ ಮಹಾವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಕೀಲರ ಸಂಘದ ಅಧ್ಯಕ್ಷ ಬಸವರಾಜ ಬಾಳೇಶ್ವರಮಠ ಮಾತನಾಡಿ, ವಿದ್ಯಾರ್ಥಿಗಳು ವಿದ್ಯಾಭ್ಯಾಸದತ್ತ ಗಮನಹರಿಸಿ ಮುಂದಿನ ಭವಿಷ್ಯವನ್ನು ಉಜ್ವಲವನ್ನಾಗಿ ಮಾಡಿಕೊಂಡು ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಬದುಕು ನಡೆಸುವಂತಾಗಲಿ. ಜೀವನದಲ್ಲಿ ಯಶಸ್ಸು ಗಳಿಸಲು ನಿರಂತರ ಪ್ರಯತ್ನ ಹಾಗೂ ಗುರಿ ಬಹಳ ಮುಖ್ಯ.

ಪ್ರಯತ್ನಿಸಿ ಸೋಲುವುದರಿಂದ ನಮ್ಮ ತಪ್ಪಿನ ಅರಿವಾಗುತ್ತದೆ. ಸೋತಾಗ ಕುಗ್ಗದೆ ಪ್ರಯತ್ನ ಮುಂದುವರೆಸಿ ಜೀವನದಲ್ಲಿ ಸಾರ್ಥಕತೆಯನ್ನು ಕಾಣಬೇಕು. ಈ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಉತ್ತಮ ಫಲಿತಾಂಶ ಸಾಧಿಸಿ, ಮುಂದಿನ ದಿನಗಳಲ್ಲಿ ಸ್ನಾತಕೋತ್ತರ ಪದವಿ ಪಡೆಯುವ ಕಡೆಗೆ ಗಮನಹರಿಸಿ ಎಂದು ಕಿವಿಮಾತು ಹೇಳಿದರು.

ವಿದ್ಯಾರ್ಥಿಗಳಾದ ಭವ್ಯ, ಕಾವ್ಯ, ದರ್ಶನ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು . ಮುಖ್ಯ ಅತಿಥಿಗಳಾಗಿ ಪ್ರಾಚಾರ್ಯ ಡಿ.ಎಸ್. ಪ್ಯಾಟಿ. ಪತ್ರಕರ್ತ ದಿಗಂಬರ ಪೂಜಾರ ಉಪನ್ಯಾಸಕರಾದ ಖುಷಾ ಅರಳಿ, ಶಶಾಂಕ, ಮೇಘಾ ವಿ., ಸುಧಾರಾಣಿ, ವಿದ್ಯಾ, ರಮೇಶ ಗಿಣಿ, ಉಪಸ್ಥಿತರಿದ್ದರು. ಉಪನ್ಯಾಸಕ ಮಂಜುನಾಥ ಬಂಡಿವಾಡ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿಗಳಾದ ಶಾರದಾ ಮಾಂಡ್ರೆ ಸ್ವಾಗತಿಸಿದರು. ಚೈತ್ರಾ ಮುಳಗುಂದ ನಿರೂಪಿಸಿದರು. ಆಶಿಯಾ ಕಮಡೊಳ್ಳಿ ವಂದಿಸಿದರು. ಪದವಿ ತರಗತಿಯ ಎಲ್ಲ ವಿದ್ಯಾರ್ಥಿಗಳು ಹಾಜರಿದ್ದರು.

ಉನ್ನತ ಶಿಕ್ಷಣ ಅಥವಾ ಉದ್ಯೋಗದೊಂದಿಗೆ ತಮ್ಮ ಜೀವನದಲ್ಲಿ ಯಶಸ್ಸು ಪಡೆಯಲು ತಮಗೆ ದೊರೆತ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡು ಉತ್ತಮ ಜೀವನಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಜೀವನದಲ್ಲಿ ನೆಮ್ಮದಿಯನ್ನು ಪಡೆಯಲು ಸಾಧ್ಯವಿದೆ. ವಿದ್ಯಾರ್ಥಿಗಳು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ಆ ಮೂಲಕ ಉತ್ತಮ ಸಮಾಜವನ್ನು ನಿರ್ಮಾಣ ಮಾಡಬೇಕು ಎಂದು ಪ್ರಶಾಂತ ನೆಲವಿಗಿ ಕರೆ ನೀಡಿದರು.


Spread the love

LEAVE A REPLY

Please enter your comment!
Please enter your name here