ಕನ್ನಡಿಗರಲ್ಲಿ ಕೆಚ್ಚು ಮೂಡಿಸಿದ ಆಲೂರರು

0
Lecture on Aluru Venkataraya at Gadag District Kasapa Sahitya Sinchana
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಹರಿದು ಹಂಚಿಹೋಗಿದ್ದ ಕನ್ನಡ ನೆಲವನ್ನು ಒಂದುಗೂಡಿಸಲು ಅವಿರತವಾಗಿ ಶ್ರಮಿಸಿ ‘ಕನ್ನಡ ಕುಲಪುರೋಹಿತ’ರೆಂದು ಖ್ಯಾತರಾಗಿದ್ದವರು ಆಲೂರ ವೆಂಕಟರಾಯರು. ಕನ್ನಡಿಗರಲ್ಲಿ ಕೆಚ್ಚನ್ನು ಮೂಡಿಸಿ ಏಕೀಕರಣ ಹೋರಾಟಕ್ಕೆ ಹೊಸ ರೂಪವನ್ನು ನೀಡಿದರು. ಲೇಖನ, ನಾಟಕ, ಕೀರ್ತನಗಳ ಮೂಲಕ ಜಾಗೃತಿಯನ್ನು ಮೂಡಿಸಿದರು ಎಂದು ಬರಹಗಾರ ಬಿ.ಎಲ್. ಪತ್ತಾರ ನುಡಿದರು.
ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ತೋಂಟದ ಶ್ರೀಗಳ ಕನ್ನಡ ಭವನದಲ್ಲಿ ಜರುಗಿದ `ಸಾಹಿತ್ಯ ಸಿಂಚನ’ ಮಾಲಿಕೆಯಲ್ಲಿ ಕನ್ನಡಕ್ಕೆ ಆಲೂರು ವೆಂಕಟರಾಯರ ಕೊಡುಗೆ ವಿಷಯದ ಕುರಿತು ಮಾತನಾಡಿದರು.
ಸ್ವಧರ್ಮ, ಸ್ವದೇಶಿ, ಸ್ವಭಾಷೆ ಹಾಗೂ ಸ್ವರಾಜ್ಯ ಇವುಗಳ ಹುಚ್ಚು ಹಿಡಿಸಿಕೊಂಡ ಆಲೂರರು ವಕೀಲಿ ವೃತ್ತಿಯನ್ನು ಬಿಟ್ಟು ಕರ್ನಾಟಕ ಏಕೀಕರಣಕ್ಕೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟರು. ಇತಿಹಾಸದಲ್ಲಿ ಆಸಕ್ತಿಯಿದ್ದ ಆಲೂರರು ಕರ್ನಾಟಕ ಇತಿಹಾಸ ಸಂಶೋಧನಾ ಮಂಡಳಿಯನ್ನು ಸ್ಥಾಪಿಸಿದರು. ಕರ್ನಾಟಕ ವಿದ್ಯಾವರ್ಧಕ ಸಂಘದ ಮುಖವಾಣಿಯಾಗಿದ್ದ ‘ವಾಗ್ಭೂಷಣ’ ಹಾಗೂ ಜಯಕರ್ನಾಟಕ ಪತ್ರಿಕೆಯ ಮೂಲಕ ಕನ್ನಡಿಗರ ಸ್ವಾಭಿಮಾನವನ್ನು ಬಡಿದೆಬ್ಬಿಸುವ ಲೇಖನವನ್ನು ಬರೆದು ಪ್ರಕಟಿಸಿದರು. 1915ರಲ್ಲಿ ಕರ್ನಾಟಕ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಲು ಕಾರಣೀಭೂತರಾದರು. ಶಿಕ್ಷಣ ಮಿಮಾಂಸೆ, ಕರ್ನಾಟಕ ಗತವೈಭವ, ಗೀತಾರಹಸ್ಯ, ರಾಷ್ಟ್ರೀಯತೆಯ ಮೀಮಾಂಸೆ, ನನ್ನ ಜೀವನ ಸ್ಮೃತಿಗಳು ಇವರ ಕೃತಿಗಳಾಗಿವೆ. ಕನ್ನಡ ನಾಡು-ನುಡಿಗೆ ಆಲೂರರು ನೀಡಿದ ಕೊಡುಗೆ ಅನನ್ಯವಾಗಿದೆಯೆಂದು ತಿಳಿಸಿದರು.
ಅತಿಥಿ ಎಚ್.ಟಿ. ಸಂಜೀವಸ್ವಾಮಿ ಮಾತನಾಡಿ, ನಿತ್ಯ ಬಳಸುವ ಇಂಗ್ಲೀಷ್ ಪದಗಳಿಗೆ ಕನ್ನಡದ ಪರ್ಯಾಯ ಪದಗಳನ್ನು ಪ್ರತಿವಾರ ಪರಿಚಯಿಸುವ ಕಾರ್ಯವಾಗಬೇಕು ಎಂದರಲ್ಲದೆ, ಮುಕ್ತ ಗ್ರಂಥಾಲಯವನ್ನು ಸ್ಥಾಪಿಸಲು ಸಲಹೆ ನೀಡಿದರು.
ಕಿಶೋರಬಾಬು ನಾಗರಕಟ್ಟಿ ಸ್ವಾಗತಿಸಿದರು. ಶಿವಾನಂದ ಗಿಡ್ನಂದಿ ಕಾರ್ಯಕ್ರಮ ನಿರೂಪಿಸಿದರು.
ಶ್ರೀಕಾಂತ ಬಡ್ಡೂರ ವಂದಿಸಿದರು. ಕಾರ್ಯಕ್ರಮದಲ್ಲಿ ಪ್ರೊ. ಚಂದ್ರಶೇಖರ ವಸ್ತçದ, ಪ್ರೊ. ಕೆ.ಎಚ್. ಬೇಲೂರ, ಸಿ.ಎಂ. ಮಾರನಬಸರಿ, ಪ್ರ.ತೋ. ನಾರಾಯಣಪೂರ, ಎಸ್.ಎಸ್. ಕಳಸಾಪುರಶೆಟ್ರು, ಪ್ರೊ. ಎಸ್.ಯು. ಸಜ್ಜನಶೆಟ್ಟರ್, ಎಸ್.ಎಸ್. ಸೂಳಿಕೇರಿ, ಶಶಿಕಾಂತ ಕೊರ್ಲಹಳ್ಳಿ, ರತ್ನಕ್ಕ ಪಾಟೀಲ, ಪದ್ಮಾ ಕಬಾಡಿ, ಮಂಜುಳಾ ವೆಂಕಟೇಶಯ್ಯ, ರಕ್ಷಿತಾ ಎಸ್.ಗಿಡ್ನಂದಿ, ರತ್ನಾ ಪುರಂತರ, ಸುಧಾ ಬಳ್ಳಿ, ಶೈಲಜಾ ಗಿಡ್ನಂದಿ, ಬಸವರಾಜ ಗಣಪ್ಪನವರ, ಎಸ್.ಎ. ಪಾಟೀಲ, ಜೆ.ಎ. ಪಾಟೀಲ, ಅಮರೇಶ ರಾಂಪೂರ ಮುಂತಾದವರು ಉಪಸ್ಥಿತರಿದ್ದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ, ಆಲೂರು ವೆಂಕಟರಾಯರು ಮುಂಬೈದಲ್ಲಿ ವ್ಯಾಸಾಂಗ ಮಾಡುತ್ತಿರುವ ಸಂದರ್ಭದಲ್ಲಿಯೇ ಕನ್ನಡ ನಾಡು ನುಡಿಗೆ ಪಣ ತೊಟ್ಟರು. ಭಾಷಾಭಿಮಾನ ಮತ್ತು ದೇಶಾಭಿಮಾನವನ್ನು ಜೊತೆಯಾಗಿ ಮುನ್ನಡೆಸಿದರು ಎಂದು ತಿಳಿಸಿದರು.

Spread the love
Advertisement

LEAVE A REPLY

Please enter your comment!
Please enter your name here