ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದಲ್ಲಿ 1988ರಲ್ಲಿ ಅಂಜುಮನ್-ಎ-ಇಸ್ಲಾಂ ಸಂಸ್ಥೆಗೆ ಪುರಸಭೆಯಿಂದ ದೇಸಾಯಿ ಬಣದ ಜಾಗೆಯನ್ನು ಮಂಜೂರ ಮಾಡಿದೆ. ಇದೀಗ ಅದರಲ್ಲಿ ನಿರ್ಮಿಸಲಾಗಿದ್ದ ಮಳಿಗೆಗಳು ಶಿಥಿಲಗೊಂಡಿರುವ ಹಿನ್ನೆಲೆಯಲ್ಲಿ ಅವುಗಳ ದುರಸ್ಥಿಗೆ ಅವಕಾಶ ಕಲ್ಪಿಸುವಂತೆ ಆಗ್ರಹಿಸಿ ಪುರಸಭೆ ಮುಖ್ಯಾಧಿಕಾರಿ ಮಹೇಶ ಹಡಪದ ಅವರಿಗೆ ಪಟ್ಟಣದ ಮುಸ್ಲಿಂ ಸಾರ್ವಜನಿಕರು ಹಾಗೂ ಮುಸ್ಲಿಂ ಸಂಘ-ಸಂಸ್ಥೆಗಳು ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿ ಮುಸ್ಲಿಂ ಸಮಾಜದ ಮುಖಂಡರು, 1988ರಲ್ಲಿ ಅಂಜುಮನ್-ಎ-ಇಸ್ಲಾಂ ಕಮಿಟಿಗೆ ಒಂದು ಕಾರ್ಯಲಯ ಹಾಗೂ 5 ಸಣ್ಣ ಮಳಿಗೆಗಳನ್ನು ಪುರಸಭೆ ಪರವಾನಿಗೆಯೊಂದಿಗೆ ನಿರ್ಮಿಸಿಕೊಳ್ಳಲಾಗಿದೆ. ಇದೀಗ ಮಳಿಗೆಗಳು ಶಿಥಿಲಗೊಂಡು ಬೀಳುವ ಹಂತಕ್ಕೆ ತಲುಪ್ಪಿದ್ದರಿಂದ ಪುರಸಭೆಯಿಂದ ಪರವಾನಿಗೆ ಪಡೆದು ದುರಸ್ಥಿ ಕಾರ್ಯ ಕೈಗೊಳ್ಳಲಾಗಿದೆ. ಆದರೆ ಕೆಲವು ಸಂಘಟನೆಗಳು ಸ್ಥಳಕ್ಕೆ ಬಂದು ದುರಸ್ತಿ ಕೆಲಸಕ್ಕೆ ಅಡ್ಡಿಪಡಿಸುತ್ತಿದ್ದಾರೆ.
ಈ ರೀತಿಯ ನಡವಳಿಕೆ ಸರಿಯಲ್ಲ ಮತ್ತು ಇದರಿಂದ ಹಿಂದೂ-ಮುಸ್ಲಿಂ ಭಾಂದವರ ಸಾಮರಸ್ಯಕ್ಕೆ ಧಕ್ಕೆಯಾಗುತ್ತದೆ. ಆದ್ದರಿಂದ ಮಳಿಗೆ ದುರಸ್ಥಿ ಕಾರ್ಯಕ್ಕೆ ಆಗುತ್ತಿರುವ ಅಡ್ಡಿ ಸರಿಪಡಿಸಿ ಅವಕಾಶ ಕಲ್ಪಿಸಬೇಕು ಎಂದು ವಿನಂತಿಸಿದರು.
ಮನವಿ ಸ್ವೀಕರಿಸಿದ ಪುರಸಭೆ ಮುಖ್ಯಾಧಿಕಾರಿಗಳು ದಾಖಲೆ ಪರಿಶೀಲನೆ ಮಾಡಿ, ಮಾಹಿತಿ ಪಡೆದು ಸೂಕ್ತ ಕ್ರಮ ಕೈಗೊಳ್ಳುವದಾಗಿ ಹೇಳಿದರು. ಈ ಸಂದರ್ಭದಲ್ಲಿ ಮುಸ್ಲಿಂ ಸಮಾಜದ ಸಾರ್ವಜನಿಕರು, ಸಂಘ-ಸಂಸ್ಥೆಗಳ ಮುಖಂಡರು, ಯುವಕರು ಇದ್ದರು.