ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದಲ್ಲಿ ಅನೇಕ ಕಿರಾಣಿ, ಬೇಕರಿ ಸೇರಿದಂತೆ ಇನ್ನಿತರ ಅಂಗಡಿಗಳ ಮೇಲೆ ಪುರಸಭೆ ಮುಖ್ಯಾದಿಕಾರಿ ಮಹೇಶ ಹಡಪದ ನೇತೃತ್ವದಲ್ಲಿ ಗುರುವಾರ ಮುಂಜಾನೆ ಹಠಾತ್ ದಾಳಿ ನಡೆಸಿ, ಸುಮಾರು ಒಂದು ಕ್ವಿಂಟಲ್‌ಗೂ ಅಧಿಕ ನಿಷೇದಿತ ಪ್ಲಾಸ್ಟಿಕ್ ಬ್ಯಾಗುಗಳು, ಕಪ್‌ಗಳನ್ನು ವಶಪಡಿಸಿಕೊಳ್ಳಲಾಯಿತು.
ಗುರುವಾರ ಮುಂಜಾನೆ ಮುಖ್ಯಾಧಿಕಾರಿ, ಅರೋಗ್ಯ ಹಾಗೂ ಕಂದಾಯ ಸಿಬ್ಬಂದಿಗಳು ಪೊಲೀಸ್ ಭದ್ರತೆಯಲ್ಲಿ ಪಟ್ಟಣದ ವಾಣಿಜ್ಯ ಮಳಿಗೆ ಹಾಗೂ ಬೇಕರಿ ಸೇರಿದಂತೆ ಇನ್ನಿತರ ಅಂಗಡಿಗಳ ಮೇಲೆ ದಾಳಿ ನಡೆಸಿ, ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಪಟ್ಟಣದಲ್ಲಿ ಸುಮಾರು 60 ವಾಣಿಜ್ಯ ಅಂಗಡಿಗಳ ಮೇಲೆ ದಾಳಿ ಮಾಡಿ, ಪ್ಲಾಸ್ಟಿಕ್ ಬಾಟಲ್, ಕಪ್, ಕ್ಯಾರಿಬ್ಯಾಗ್, ಪೈಪ್‌ಗಳು ಇತ್ಯಾದಿ ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ಅಂದಾಜು 1.20 ಕ್ವಿಂಟಲ್ ನಿಷೇದಿತ ಪ್ಲಾಸ್ಟಿಕ್ ವಶಪಡಿಸಿಕೊಂಡು ಅಂಗಡಿಕಾರರಿಗೆ ಒಟ್ಟೂ ರೂ. 36 ಸಾವಿರಕ್ಕೂ ಅಧಿಕ ದಂಡ ವಿಧಿಸಲಾಗಿದೆ.
ಪುರಸಭೆ ಮುಖ್ಯಾಧಿಕಾರಿ ಮಹೇಶ ಹಡಪದ ಮಾತನಾಡಿ, ನಾವು ನಮ್ಮ ಮುಂದಿನ ಪೀಳಿಗೆಗೆ ವಿಷಯುಕ್ತ ಪರಿಸರವನ್ನು ನೀಡಬಾರದು. ಆ ಕಾರಣಕ್ಕೆ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ಬಿಡಬೇಕು. ಬೀದಿ ಬದಿ ವ್ಯಾಪಾರಸ್ಥರು, ಕಿರಾಣಿ, ಬೇಕರಿ ಅಂಗಡಿಗಳು ಸೇರಿದಂತೆ ಎಲ್ಲೆಡೆ ಏಕ ಬಳಕೆಯ ನಿಷೇದಿತ ಪ್ಲಾಸ್ಟಿಕ್ ಬಳಕೆ ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಒಂದು ವೇಳೆ ಪ್ಲಾಸ್ಟಿಕ್ ಬಳಕೆ ಅಥವಾ ಮಾರಾಟ ಮಾಡುವುದು ಕಂಡುಬಂದಲ್ಲಿ ಪ್ಲಾಸ್ಟಿಕ್ ವಶಪಡಿಸಿಕೊಂಡು ಅಂಥವರ ಮೇಲೆ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ನಿಯಮದಂತೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿ, ಸಾರ್ವಜನಿಕರು ಪ್ಲಾಸ್ಟಿಕ್ ಬಳಕೆ ಮಾಡದೇ ಸಹಕರಿಸಿ ಈ ಅಭಿಯಾನವನ್ನು ಯಶಸ್ವಿಗೊಳಿಸಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಪುರಸಭೆ ವ್ಯವಸ್ಥಾಪಕಿ ಮಂಜುಳಾ ಹೂಗಾರ, ಕಂದಾಯ ಅಧಿಕಾರಿ, ಶಿವಾನಂದ ಅಜ್ಜಣ್ಣನವರ, ಆರೋಗ್ಯ ನಿರೀಕ್ಷಕ ಮಂಜುನಾಥ ಮುದಗಲ್, ಹನಮಂತ ನಂದೆಣ್ಣನವರ, ಸಿದ್ದು ಹಿರೇಮಠ, ಉಮಾ ಬೆಳವಿಗಿ ಪುರಸಭೆ ಸಿಬ್ಬಂದಿಗಳು, ಪೊಲೀಸ್ ಸಿಬ್ಬಂದಿಗಳು ಇದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಪುರಸಭೆ ಮುಖ್ಯಾಧಿಕಾರಿ ಮಹೇಶ ಹಡಪದ, ಪರಿಸರ ಹಾನಿಗೆ ಕಾರಣವಾಗುವ ಪ್ಲಾಸ್ಟಿಕ್ ಬಳಕೆ ನಿಷೇಧಿಸಿದ್ದರೂ ಸಹ ಪಟ್ಟಣದಲ್ಲಿನ ಕೆಲವು ಅಂಗಡಿಗಳಲ್ಲಿ ಪ್ಲಾಸ್ಟಿಕ್ ಚೀಲಗಳ ಬಳಕೆ ನಿಂತಿಲ್ಲ. ಪ್ಲಾಸ್ಟಿಕ್ ಬಳಸುವುದರಿಂದ ತ್ಯಾಜ್ಯ ಹೆಚ್ಚಾಗುತ್ತದೆ ಹಾಗೂ ಪ್ಲಾಸ್ಟಿಕ್ ಮಣ್ಣಿನಲ್ಲಿ ಕೊಳೆಯುವುದಿಲ್ಲ. ಇದರಿಂದ ಪರಿಸರ ಮಾಲಿನ್ಯ ಹೆಚ್ಚಾಗುತ್ತದೆ. ಆರೋಗ್ಯಕ್ಕೂ ಸಹ ಇದು ಒಳ್ಳೆಯದಲ್ಲ ಎಂದರು.