ಸಾರ್ವಜನಿಕರ ಸುರಕ್ಷತೆಗೆ ಪ್ರಥಮಾದ್ಯತೆ ನೀಡಿ

0
A meeting was held with Naragunda and Rona taluk administration on flood situation
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಜಿಲ್ಲೆಯಲ್ಲಿ ಬೆಣ್ಣೆಹಳ್ಳ ಹಾಗೂ ಮಲಪ್ರಭಾ ನದಿಯ ಪ್ರವಾಹಕ್ಕೊಳಗಾಗುವ ಗ್ರಾಮಗಳ ಸಾರ್ವಜನಿಕರ ಸುರಕ್ಷತೆಗೆ ಸ್ಥಳೀಯ ಅಧಿಕಾರಿಗಳು ಪ್ರಥಮಾದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಸೂಚನೆ ನೀಡಿದರು.

Advertisement

ಜಿಲ್ಲಾಧಿಕಾರಿಗಳ ಕಚೇರಿಯ ವಿಡಿಯೋ ಸಭಾಂಗಣದಲ್ಲಿ ಗುರುವಾರ ಬೆಣ್ಣೆಹಳ್ಳ ಹಾಗೂ ಮಲಪ್ರಭಾ ನದಿಯ ಪ್ರವಾಹದಿಂದ ತೊಂದರೆಗೊಳಗಾಗುವ ಗ್ರಾಮಗಳ ಸುರಕ್ಷತೆ ಕುರಿತಂತೆ ನರಗುಂದ ಹಾಗೂ ರೋಣ ತಾಲೂಕಾ ಆಡಳಿತದೊಂದಿಗೆ ಪ್ರವಾಹ ಪರಿಸ್ಥಿತಿ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

2009 ಹಾಗೂ 2019ರಲ್ಲಿ ಅಧಿಕ ಪ್ರಮಾಣದ ಪ್ರವಾಹ ಪರಿಸ್ಥಿತಿ ಎದುರಾಗಿತ್ತು. ಆ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಿದ ಅನೇಕ ಅಧಿಕಾರಿಗಳು ಅನುಭವ ಹೊಂದಿದವರಾಗಿದ್ದಾರೆ. ಪ್ರವಾಹ ಪರಿಸ್ಥಿತಿಯನ್ನು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸಲು ಎಲ್ಲ ಅಧಿಕಾರಿಗಳು ಸನ್ನದ್ಧರಾಗಬೇಕೆಂದು ಸೂಚಿಸಿದರು.

A meeting was held with Naragunda and Rona taluk administration on flood situation

ನವಲಗುಂದ ಸೇರಿದಂತೆ 5 ತಾಲೂಕುಗಳ ಮಳೆಯಿಂದ ಅಪಾರ ಪ್ರಮಾಣದ ನೀರು ಬೆಣ್ಣೆಹಳ್ಳ ತಲುಪಿ ಅಲ್ಲಿಂದ ಜಿಲ್ಲೆಗೆ ಒಮ್ಮೆಲೇ ನೀರು ಹರಿದು ಬರಲಿದೆ. ಇದರಿಂದ ನರಗುಂದ ಹಾಗೂ ರೋಣ ತಾಲೂಕಿನ ಹಲವು ಗ್ರಾಮಗಳು ಪ್ರವಾಹಕ್ಕೊಳಗಾಗುವ ಸಂಭವವಿದ್ದು, ಈಗಾಗಲೇ ತಾಲೂಕಾಡಳಿತ ಅಂತಹ ಗ್ರಾಮಗಳನ್ನು ಗುರುತಿಸಿದೆ. ನೀರಿನ ಪ್ರಮಾಣಕ್ಕನುಗುಣವಾಗಿ ಅಧಿಕಾರಿಗಳು ಪ್ರವಾಹ ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸಬೇಕು ಎಂದು ನಿರ್ದೇಶಿಸಿದರು.

ಪ್ರವಾಹ ಪರಿಸ್ಥಿತಿ ತಲೆದೋರಿದಲ್ಲಿ ಅಗ್ನಿಶಾಮಕ ಇಲಾಖೆ ತಂಡ ತಕ್ಷಣ ಕಾರ್ಯಪ್ರವೃತ್ತವಾಗಬೇಕು. ತಾಲೂಕಾ ಆಡಳಿತದೊಂದಿಗೆ ವಿವಿಧ ಇಲಾಖೆ ಅಧಿಕಾರಿಗಳು ಸಮನ್ವಯ ಸಾಧಿಸುವ ಮೂಲಕ ಪ್ರವಾಹ ಪರಿಸ್ಥಿತಿ ನಿರ್ವಹಣೆ ಮಾಡಬೇಕು. ತಗ್ಗುಪ್ರದೇಶಗಳಲ್ಲಿ ಹಾಗೂ ಶಿಥಿಲಾವಸ್ಥೆಯಲ್ಲಿರುವ ಮಣ್ಣಿನ ಮನೆಗಳಲ್ಲಿ ವಾಸಿಸುವವರನ್ನು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಬೇಕು ಎಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹೇಳಿದರು.

ಜಿ.ಪಂ. ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಭರತ್ ಎಸ್ ಮಾತನಾಡಿ, ಪ್ರವಾಹ ಪರಿಸ್ಥಿತಿ ಸಮರ್ಥವಾಗಿ ನಿಭಾಯಿಸಲು ಎಲ್ಲ ಅಧಿಕಾರಿಗಳು ಸನ್ನದ್ಧರಾಗಬೇಕು. ಅಗತ್ಯವಿದ್ದಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಬೇಕು.

ಕಾಳಜಿ ಕೇಂದ್ರಗಳನ್ನು ಈಗಾಗಲೇ ಗುರುತಿಸಲಾಗಿದೆ. ಕಾಳಜಿ ಕೇಂದ್ರಗಳಲ್ಲಿ ಅಗತ್ಯ ಮೂಲಭೂತ ಸೌಲಭ್ಯಗಳು ಇರುವಂತೆ ಪರಿಶೀಲಿಸಬೇಕು. ಸಂದರ್ಭಾನುಸಾರ ಸಾರ್ವಜನಿಕರನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸುವಲ್ಲಿ ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ತಮ್ಮ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿಭಾಯಿಸಬೇಕೆಂದು ಸೂಚಿಸಿದರು.

ನರಗುಂದ ಹಾಗೂ ರೋಣ ತಹಸೀಲ್ದಾರರಾದ ಶ್ರೀಶೈಲ ತಳವಾರ ಹಾಗೂ ನಾಗರಾಜ ಮಾತನಾಡಿ, ಪ್ರವಾಹ ಪರಿಸ್ಥಿತಿ ನಿರ್ವಹಣೆಗೆ ಈಗಾಗಲೇ ಪೂರ್ವಸಿದ್ಧತೆ ಮಾಡಿಕೊಳ್ಳಲಾಗಿದೆ. ಸ್ಥಳೀಯ ಜೆಸಿಬಿ ಮಾಲೀಕರು, ನುರಿತ ಈಜುಗಾರರು, ತರಕಾರಿ ಹಾಗೂ ಕಿರಾಣಿ ಅಂಗಡಿ ಮಾಲೀಕರು ಹಾಗೂ ವೈದ್ಯರ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಅಲ್ಲದೇ ಜನ-ಜಾನುವಾರು ಸ್ಥಳಾಂತರಕ್ಕೆ ಸ್ಥಳ ಗುರುತಿಸಿಟ್ಟುಕೊಳ್ಳಲಾಗಿದೆ. ಮೊದಲು ಪ್ರವಾಹಕ್ಕೀಡಾಗುವ ಗ್ರಾಮಗಳ ಪಟ್ಟಿಯನ್ನು ಮಾಡಿಟ್ಟುಕೊಂಡಿದ್ದು, ಸಂದರ್ಭಕ್ಕನುಸಾರವಾಗಿ ಸಮರ್ಪಕವಾಗಿ ಪ್ರವಾಹ ನಿರ್ವಹಣೆಗೆ ಕ್ರಮ ವಹಿಸಲಾಗುವುದು ಎಂದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ, ಜಿ.ಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಉಪವಿಭಾಗಾಧಿಕಾರಿ ಗಂಗಪ್ಪ ಎಂ, ಡಿಡಿಎಲ್‌ಆರ್ ರುದ್ರಗೌಡ, ಜಂಟಿ ಕೃಷಿ ನಿರ್ದೇಶಕಿ ತಾರಾಮಣಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ಎಸ್. ನೀಲಗುಂದ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಶಶಿಕಾಂತ ಕೋಟಿಮನಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪಿ.ವೈ. ಶೆಟ್ಟೆಪ್ಪನವರ, ಅಗ್ನಿಶಾಮಕ ಇಲಾಖೆ ಅಧಿಕಾರಿ ವಿ.ಎಸ್. ಠಕ್ಕೇಕರ್, ವಿಪತ್ತು ನಿರ್ವಹಣಾ ಪರಿಣಿತ ಶಿವಾನಂದ ರಾಜನಾಳ ಸೇರಿದಂತೆ ತಾಲೂಕಾ ಕಾರ್ಯನಿರ್ವಾಹಕ ಅಧಿಕಾರಿಗಳು, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಮಾತನಾಡಿ, ನರಗುಂದ ಹಾಗೂ ರೋಣ ತಾಲೂಕುಗಳ ಪೊಲೀಸ್ ಅಧಿಕಾರಿಗಳು ಬೀಟ್ ಮಾಡುವ ಮೂಲಕ ಪ್ರವಾಹ ಕುರಿತಂತೆ ಮಾಹಿತಿ ಸಂಗ್ರಹ ಮಾಡಿಟ್ಟುಕೊಳ್ಳಬೇಕು. ಅಲ್ಲದೇ ಪ್ರವಾಹ ಪರಿಸ್ಥಿತಿ ಎದುರಾದಲ್ಲಿ ಜನಸಾಮಾನ್ಯರು ನದಿ ಅಂಚಿನ ಕಡೆಗೆ ತೆರಳದಂತೆ ಬ್ಯಾರಿಕೇಡ್ ಹಾಕುವ ಮೂಲಕ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು. ಯಾವುದೇ ಪ್ರಾಣಹಾನಿಗೆ ಅವಕಾಶ ನೀಡಬಾರದು ಎಂದರು.

ನವಿಲುತೀರ್ಥ ಡ್ಯಾಂ 37.731 ಟಿಎಂಸಿ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿದ್ದು, ಪ್ರಸ್ತುತ 24 ಟಿಎಂಸಿ ನೀರು ಸಂಗ್ರಹವಾಗಿದೆ. ಡ್ಯಾಮಿನ ನೀರಿನ ಒಳಹರಿವು 26 ಸಾವಿರ ಕ್ಯೂಸೆಕ್ ಇದ್ದು, ಶೀಘ್ರವೇ ನವಿಲುತೀರ್ಥ ಡ್ಯಾಮ್‌ನಿಂದ ನೀರು ಹೊರಬಿಡುವ ಸಾಧ್ಯತೆಯಿದೆ. ನವಿಲುತೀರ್ಥ ಡ್ಯಾಮಿನಿಂದ ಅಪಾರ ಪ್ರಮಾಣದ ನೀರು ಬಿಟ್ಟಲ್ಲಿ ಮುಂದಿನ 18 ಗಂಟೆಯೊಳಗಾಗಿ ನೀರು ಜಿಲ್ಲೆಗೆ ಪ್ರವೇಶ ಮಾಡಲಿದೆ. ಡ್ಯಾಂನಿಂದ ನೀರು ಹೊರಬಿಡುವ ಮಾಹಿತಿ ದೊರೆತ ತಕ್ಷಣ ತಾಲೂಕಾಡಳಿತಗಳು ಪ್ರವಾಹ ಪೀಡಿತಕ್ಕೊಳಗಾಗುವ ಗ್ರಾಮಗಳಲ್ಲಿ ಕಟ್ಟೆಚ್ಚರ ವಹಿಸುವ ಮೂಲಕ ಆಗುವ ಜೀವ ಹಾನಿ ತಪ್ಪಿಸಬೇಕು.
– ಗೋವಿಂದರೆಡ್ಡಿ.
ಜಿಲ್ಲಾಧಿಕಾರಿಗಳು, ಗದಗ.

 


Spread the love

LEAVE A REPLY

Please enter your comment!
Please enter your name here