ವಿಜಯಸಾಕ್ಷಿ ಸುದ್ದಿ, ಗದಗ : ಶಿಕ್ಷಣವು ಬಾಳಿಗೆ ಬೆಳಕಾಗಬಲ್ಲದು. ಶಿಕ್ಷಣದಿಂದ ಮನುಷ್ಯ ಉನ್ನತಿಗೇರಬಲ್ಲ. ಇಂತಹ ಶಿಕ್ಷಣವನ್ನು ಮಕ್ಕಳಿಗೆ ನೀಡುವಲ್ಲಿ ತಮ್ಮ ಬದುಕನ್ನೇ ಸಮರ್ಪಿಸಿಕೊಂಡ ದಿ. ಬಿ.ಜಿ. ಅಣ್ಣಿಗೇರಿ ಗುರುಗಳು ಸದಾಕಾಲ ಸ್ಮರಣೀಯರಾಗಿದ್ದಾರೆ ಎಂದು ಗದುಗಿನ ಜ.ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಹೇಳಿದರು.
ಅವರು ನಗರದ ಬಿ.ಜಿ. ಅಣ್ಣಿಗೇರಿ ಗುರುಗಳ ಆಶ್ರಮದಲ್ಲಿ ಶಿಕ್ಷಣ ಪ್ರೇಮಿ, ತ್ಯಾಗಜೀವಿ ಬಿ.ಜಿ. ಅಣ್ಣಿಗೇರಿ ಗುರುಗಳ ಪ್ರತಿಭಾ ಪ್ರತಿಷ್ಠಾನವು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮೊದಲ ಮೂರು ಸ್ಥಾನಗಳನ್ನು ಪಡೆದ ಗದಗ ತಾಲೂಕಿನ ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ, ಬಿ.ಜಿ. ಅಣ್ಣಿಗೇರಿ ಗುರುಗಳ 94ನೇ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಅಣ್ಣಿಗೇರಿ ಗುರುಗಳ ಶಿಷ್ಯ ಸಮೂಹ ಅವರ ಮಾದರಿ ಬದುಕಿಗೆ, ಅವರ ವಿಶಿಷ್ಠ ವ್ಯಕ್ತಿತ್ವಕ್ಕೆ ತಲೆದೂಗಿದ್ದು, ಸರಕಾರಿ ಶಾಲೆಗಳ ಪ್ರತಿಭಾನ್ವಿತ ಮಕ್ಕಳಿಗೆ ಅವರ ಹೆಸರಿನಲ್ಲಿ ಪುರಸ್ಕಾರ ನೀಡಿ ಗೌರವ ಸಲ್ಲಿಸಲು ಪ್ರತಿಷ್ಠಾನದ ಮುಂದಾಗಿರುವದು ಶ್ಲಾಘನೀಯ ಎಂದರು.
ಪ್ರತಿ ವರ್ಷ ಪ್ರತಿಭಾ ಪುರಸ್ಕಾರ ನೀಡುತ್ತ ಬಂದಿರುವ ಪ್ರತಿಷ್ಠಾನಕ್ಕೆ ಇದೀಗ ದಾನಿಗಳೂ ಕೈ ಜೋಡಿಸಿ ಪ್ರತಿಭಾನ್ವಿತ ಮಕ್ಕಳಿಗೆ ಪ್ರೋತ್ಸಾಹಿಸುತ್ತಿರುವದು ಅಭಿನಂದನೀಯ. ಪ್ರತಿಷ್ಠಾನವು ಅಣ್ಣಿಗೇರಿ ಅವರ ಹೆಸರಿನಲ್ಲಿ ಪ್ರತಿ ವರ್ಷ ಹಿರಿಯ ಸಾಧಕ ಶಿಕ್ಷಕರಿಗೆ ರಾಜ್ಯ-ರಾಷ್ಟçಮಟ್ಟದಲ್ಲಿ ಪ್ರಶಸ್ತಿ ನೀಡುವ ಮೂಲಕ ಹಾಗೂ ಅಣ್ಣಿಗೇರಿ ಅವರ ಆದರ್ಶ ಬದುಕನ್ನು ಪಠ್ಯಕ್ರಮದಲ್ಲಿ ಅಳವಡಿಸುವ ಮೂಲಕ ಅವರನ್ನು ಸದಾ ಸ್ಮರಿಸುವಂತೆ ಮಾಡುವ ಕಾರ್ಯ ಆಗಬೇಕೆಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಗದಗ ಗ್ರಾಮೀಣ ಬಿಇಓ ವ್ಹಿ.ವ್ಹಿ. ನಡುವಿನಮನಿ, ಶಹರ ಬಿಇಓ ಆರ್.ಎಸ್.ಬುರಡಿ, ವೈದ್ಯರಾದ ಡಾ. ಸಿ.ಸೊಲೋಮನ್, ನಿವೃತ್ತ ಪ್ರಾಚಾರ್ಯ ಸಿದ್ದು ಯಾಪಲಪರವಿ ಅವರು ಅಣ್ಣಿಗೇರಿ ಗುರುಗಳ ಬದುಕು, ಶಿಕ್ಷಣಕ್ಕೆ ಸಲ್ಲಿಸಿದ ಸೇವೆ ಹಾಗೂ ಅವರ ತರುವಾಯ ಗುರುಕುಲ ಆಶ್ರಮ, ಪ್ರತಿಷ್ಠಾನದ ಕಾರ್ಯವೈಖರಿಯನ್ನು ಕೊಂಡಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರತಿಷ್ಠಾನದ ಅಧ್ಯಕ್ಷ ಶಿವಕುಮಾರ ಎಚ್.ಪಾಟೀಲ ಮಾತನಾಡಿ, ಅಣ್ಣಿಗೇರಿ ಗುರುಗಳ ಸೇವೆ, ಪ್ರತಿಷ್ಠಾನದ ನಡೆದ ಬಂದ ದಾರಿ ವಿವರಿಸಿದರು. ವೇದಿಕೆ ಮೇಲೆ ಬಸವರಾಜ ಬಿಂಗಿ, ಡಾ. ಜಿ.ಬಿ. ಪಾಟೀಲ, ರವಿ ದಂಡಿನ, ಶಂಕ್ರಪ್ಪ ಅಣ್ಣಿಗೇರಿ ಉಪಸ್ಥಿತರಿದ್ದರು. ಕೆ.ಎಸ್. ಕುರ್ತಕೋಟಿ ಸ್ವಾಗತಿಸಿ ನಿರೂಪಿಸಿ ಪರಿಚಯಿಸಿದರು. ಶಂಕ್ರಪ್ಪ ಅಣ್ಣಿಗೇರಿ ವಂದಿಸಿದರು.
ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಗದುಗಿನ ಸಿದ್ಧಲಿಂಗ ನಗರದ ಸರಕಾರಿ ಪ್ರೌಢಶಾಲೆಯ ಸೃಷ್ಟಿ ಸೆಂಡಿಗಿ, ಸಹನಾ ಕಟಗೇರಿ, ಭಾವನಾ ಕಟಗಿ, ಷಣ್ಮುಖ ಲಕ್ಕಣ್ಣವರ, ಕಸ್ತೂರಿ ನಾಯ್ಕರ್, ಗದುಗಿನ ಸರಕಾರಿ ಉರ್ದು ಪ್ರೌಢಶಾಲೆಯ ಶಾಹಿಸ್ತಾ ಅಕ್ಕಿಆಲೂರ, ಫರ್ನಾಜ್ ಮುಳಗುಂದ, ಬತೂಲ್ ಮಕಾನದಾರ, ಅತಿಯಾ ಗುಳಗುಂದಿ, ಜೋಯಾ ಕಿತ್ತೂರ ಹಾಗೂ ಗದುಗಿನ ಗಾಂಧಿ ನಗರದ ಸರಕಾರಿ ಪ್ರೌಢಶಾಲೆಯ ಬಿರೇಶ್ ಪೂಜಾರ, ನವೀನ ಸಕ್ಕರಗೌಡ್ರ, ಸುದೀಪ್ ಉಪ್ಪಾರ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
Advertisement