ಪ್ರಣತಿಯ ಕೃತಿ ಆಯ್ಕೆ
ವಿಜಯಸಾಕ್ಷಿ ಸುದ್ದಿ, ಗದಗ : ಸಿಂದಗಿಯ ವಿದ್ಯಾ ಚೇತನ ಪ್ರಕಾಶನವು ರಾಜ್ಯ ಮಟ್ಟದಲ್ಲಿ ಪ್ರತಿವರ್ಷ ಅತ್ಯುತ್ತಮ ಮಕ್ಕಳ ಸಾಹಿತ್ಯ ಕೃತಿಗೆ ನೀಡುವ ಈ ಸಲದ ರಾಜ್ಯ ಮಟ್ಟದ `ಬಾಲ ಸಾಹಿತ್ಯ ಚಿಗುರು’ ಪ್ರಶಸ್ತಿಗೆ ಗದುಗಿನ ಕೆ.ಎಲ್.ಇ ಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿ, ಬಾಲಕವಯಿತ್ರಿ ಕು. ಪ್ರಣತಿ ಆರ್.ಗಡಾದ ಬರೆದಿರುವ `ನಾನು ಮಳೆಯಾದರೆ’ ಎಂಬ ಮಕ್ಕಳ ಗೀತೆಗಳ ಸಂಕಲನ ಆಯ್ಕೆಯಾಗಿದೆ ಎಂದು ವಿದ್ಯಾ ಚೇತನದ ಸಂಚಾಲಕರು ಹಾಗೂ ಖ್ಯಾತ ಮಕ್ಕಳ ಸಾಹಿತಿಗಳು ಆದ ಹ.ಮ ಪೂಜಾರ ತಿಳಿಸಿದ್ದಾರೆ.
ಜುಲೈ 28ರಂದು ಸಿಂದಗಿಯ ಸಾರಂಗಮಠದಲ್ಲಿ ಪರಮಪೂಜ್ಯ ಡಾ. ಪ್ರಭು ಸಾರಂಗ ದೇವ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಜರುಗುವ ಪ್ರಶಸ್ತಿ ಪ್ರದಾನ ಹಾಗೂ ಸನ್ಮಾನ ಸಮಾರಂಭದಲ್ಲಿ ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಅವರು ಕು. ಪ್ರಣತಿ ಆರ್.ಗಡಾದರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಸಮಾರಂಭದ ಅಧ್ಯಕ್ಷತೆಯನ್ನು ನಿವೃತ್ತ ಪ್ರಾಚಾರ್ಯ ಪ್ರೊ. ಶಾಂತು ಹಿರೇಮಠ ವಹಿಸಲಿದ್ದು, ಕಾರ್ಯಕ್ರಮವನ್ನು ಸಿಂದಗಿ ಶಾಸಕ ಅಶೋಕ್ ಮನಗೂಳಿ ಉದ್ಘಾಟಿಸಲಿದ್ದಾರೆ. ಪ್ರಶಸ್ತಿಯು ನಗದು ಮತ್ತು ಪ್ರಶಸ್ತಿ ಫಲಕ ಒಳಗೊಂಡಿದೆ.
ಬಾಲ ಸಾಹಿತ್ಯ ಪ್ರತಿಭಾ ಪುರಸ್ಕಾರಕ್ಕೆ ಆಯ್ಕೆಯಾದ ಪ್ರಣತಿ ಗಡಾದರನ್ನು ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತು, ಜಿಲ್ಲಾ ಸಿರಿಗನ್ನಡ ವೇದಿಕೆ, ಜಿಲ್ಲಾ ವಚನ ಸಾಹಿತ್ಯ ಹಾಗೂ ಸಾಂಸ್ಕೃತಿಕ ಪರಿಷತ್ತು, ಜಿಲ್ಲಾ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಮುಂತಾದ ಸಂಘಟನೆಗಳು ಅಭಿನಂದಿಸಿವೆ.
ತನ್ನ ಕವಿತೆ ವಚನ ಹಾಗೂ ಲೇಖನಗಳ ಮೂಲಕ ಮಕ್ಕಳ ಸಾಹಿತ್ಯದಲ್ಲಿ ಗಮನಸೆಳೆದ ಪ್ರಣತಿ ಗಡಾದ ಈಗಾಗಲೇ ದೆಹಲಿ ಮೈಸೂರು, ಬೆಂಗಳೂರು, ಹಾಸನ, ಕೊಪ್ಪಳ ಮುಂತಾದ ಸ್ಥಳಗಳಲ್ಲಿ ನಡೆದ ರಾಷ್ಟç ಹಾಗೂ ರಾಜ್ಯಮಟ್ಟದ ಮಕ್ಕಳ ಸಾಹಿತ್ಯದ ಕಾರ್ಯಕ್ರಮದಲ್ಲಿ ಕವಿತೆ ವಚನ ಪ್ರಬಂಧ ಮಂಡಿಸಿದ್ದಾಳೆ. ಇವಳಿಗೆ ಕಳೆದ ವರ್ಷ ಕರ್ನಾಟಕ ಸರ್ಕಾರದ ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಅಸಾಧಾರಣ ಪ್ರತಿಭಾ ಪುರಸ್ಕಾರ ಸಂದಿದೆ.