ವಿಜಯಸಾಕ್ಷಿ ಸುದ್ದಿ, ಬೆಂಗಳೂರು : ವೀರಶೈವ ಧರ್ಮ ಸರ್ವರಿಗೂ ಒಳಿತನ್ನೇ ಬಯಸುತ್ತ ಬಂದಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಅಹಿಂಸಾದಿ ದಶಧರ್ಮ ಸೂತ್ರಗಳನ್ನು ಬೋಧಿಸಿ ಮಾನವ ಜನಾಂಗವನ್ನು ಉದ್ಧರಿಸಿದ್ದಾರೆ ಎಂದು ಬಾಳೆಹೊನ್ನೂರು ಶ್ರೀರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಭಾರತ ನಗರದಲ್ಲಿ ಸಮಸ್ತ ವೀರಶೈವ ಲಿಂಗವಂತ ಸಮಾಜ ಆಯೋಜಿಸಿದ್ದ ಇಷ್ಟಲಿಂಗಪೂಜೆ ಹಾಗೂ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡುತ್ತಿದ್ದರು.
ಜಾತಿಗಿಂತ ನೀತಿ, ತತ್ವಕ್ಕಿಂತ ಆಚರಣೆ, ಮಾತಿಗಿಂತ ಕೃತಿ, ಬೋಧನೆಗಿಂತ ಸಾಧನೆ, ದಾನಕ್ಕಿಂತ ದಾಸೋಹ, ಚರಿತ್ರೆಗಿಂತ ಚಾರಿತ್ರ್ಯಕ್ಕೆ ಒತ್ತುಕೊಟ್ಟಿದ್ದು ವೀರಶೈವ ಧರ್ಮ. ಧರ್ಮ ಪ್ರಧಾನವಾದ ಭಾರತ ದೇಶದಲ್ಲಿ ಹಲವಾರು ಧರ್ಮಗಳು, ಪರಂಪರೆಗಳು ಬೆರೆತುಕೊಂಡು ಬಂದಿದ್ದರೂ ಸರ್ವರಿಗೂ ಒಳಿತನ್ನು ಬಯಸುವುದೇ ಅವೆಲ್ಲವುಗಳ ಗುರಿಯಾಗಿದೆ. ಮಾನವ ಜನ್ಮದ ಉನ್ನತಿ ಮತ್ತು ಶ್ರೇಯಸ್ಸಿಗೆ ಧರ್ಮವೇ ಮೂಲ. ಜಾತಿ ಧರ್ಮದ ಹೆಸರಿನಲ್ಲಿ ದ್ವೇಷ ಭಾವನೆ ಬೆಳೆಯಬಾರದು. ವೈಚಾರಿಕತೆ ಹೆಸರಿನಲ್ಲಿ ಧರ್ಮ-ಸಂಸ್ಕೃತಿ ನಾಶವಾಗಬಾರದು ಎಂದರು.
ಸಮಾರಂಭದಲ್ಲಿ ತಾವರೆಕೆರೆ ಶಿಲಾಮಠದ ಡಾ. ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಗಳು ಉಪದೇಶಾಮೃತ ನೀಡಿದರು. ಎಡೆಯೂರು, ಸಿದ್ಧರಬೆಟ್ಟ, ದೊಡ್ಡಗುಣಿ, ಸಂಗೊಳ್ಳಿ ಮಠದ ಶ್ರೀಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಹಿರಿಯ ಚಿತ್ರನಟ ದೊಡ್ಡಣ್ಣ, ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ. ನಾಗರಾಜಮೂರ್ತಿ, ಎಸ್ಜೆಆರ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಯು.ಎಂ. ಬಸವರಾಜ್, ಆರ್.ವಿ. ಭದ್ರಯ್ಯ, ಗ್ರಂಧಿಗೆ ಭಂಡಾರದ ಆರ್.ಬಿ. ಬಸವರಾಜ್, ಬೀರೂರು ಶಿವಸ್ವಾಮಿ, ಗಾನಸುಧೆ ಮುಖ್ಯಸ್ಥ ಶಿವಶಂಕರ ಶಾಸ್ತಿç ಮತ್ತಿತರರು ಪಾಲ್ಗೊಂಡಿದ್ದರು.