ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಮಾನವ ಕಳ್ಳಸಾಗಾಣಿಕೆ ಜಾಲಕ್ಕೆ ಹೆಚ್ಚಾಗಿ ಮಹಿಳೆಯರು ಮತ್ತು ಮಕ್ಕಳು ಬಲಿಯಾಗುತ್ತಿದ್ದು, ಇದನ್ನು ತಡೆಯುವಲ್ಲಿ ಮಕ್ಕಳು ಸಮಾಜದ ಗಮನ ಸೆಳೆಯಬೇಕು, ಅರಿವು ಮೂಡಿಸಬೇಕು ಎಂದು ಲಕ್ಷ್ಮೇಶ್ವರದ ಹಿರಿಯ ದಿವಾಣಿ ನ್ಯಾಯಾಧೀಶರಾದ ಪದ್ಮಶ್ರೀ ಆರ್.ಪಾಟೀಲ ಮಕ್ಕಳಿಗೆ ಕಿವಿಮಾತು ಹೇಳಿದರು.
ಅವರು ಬುಧವಾರ ಲಕ್ಷ್ಮೇಶ್ವರದ ಆಕ್ಸಫರ್ಡ್ ಶಾಲೆಯಲ್ಲಿ ತಾಲೂಕಾ ಕಾನೂನು ಸೇವೆಗಳ ಸಮಿತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆ, ಕಂದಾಯ ಇಲಾಖೆ ಮತ್ತು ನ್ಯಾಯವಾದಿಗಳ ಸಂಘ ಲಕ್ಷ್ಮೇಶ್ವರ ಇವುಗಳ ಆಶ್ರಯದಲ್ಲಿ ಮಾನವ ಕಳ್ಳಸಾಗಾಣಿಕೆ ತಡೆ ದಿನದ ಅಂಗವಾಗಿ ನಡೆದ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿಶ್ವಸಂಸ್ಥೆ ಸೇರಿದಂತೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪಿಡುಗಾದ ಮಾನವ ಕಳ್ಳಸಾಗಾಣಿಕೆಯನ್ನು ತಡೆಯಲು ಮುಂದಿನ ಪ್ರಜೆಗಳಾದ ಮಕ್ಕಳು ಜಾಗೃತರಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ದಿವಾಣಿ ನ್ಯಾಯಾಧೀಶರಾದ ಸತೀಶ ಎಂ. ಮಾನವ ಕಳ್ಳಸಾಗಾಣಿಕೆ ತಡೆ ಕುರಿತು ಪ್ರತಿಜ್ಞಾವಿಧಿ ಬೋಧಿಸಿದರು. ವಕೀಲರಾದ ಪಿ.ಎಂ. ವಾಲಿ ಮಾನವ ಕಳ್ಳಸಾಗಾಣಿಕೆ ತಡೆ ದಿನಾಚರಣೆಯ ಕುರಿತು ಮಕ್ಕಳಿಗೆ ನೈಜ ಘಟನೆಗಳ ಉದಾಹರಣೆಗಳನ್ನು ನೀಡುವ ಮೂಲಕ ಮಾನವ ಕಳ್ಳ ಸಾಗಾಣಿಕೆಯ ವಿಷಯದ ಕುರಿತು ಮಾಹಿತಿ ನೀಡಿದರು.
ತಹಸೀಲ್ದಾರ ವಾಸುದೇವಸ್ವಾಮಿ, ಸಹಾಯಕ ಸರ್ಕಾರಿ ಅಭಿಯೋಜಕರಾದ ಹೀನಾಕೌಸರ ಗಂಜಿಹಾಳ, ಮಾತನಾಡಿದರು. ಸಿಡಿಪಿಓ ಮೃತ್ಯುಂಜಯ ಗುಡ್ಡದಾನ್ವೇರಿ, ಪಿಎಸ್‌ಐ ಈರಪ್ಪ ರಿತ್ತಿ, ವಕೀಲರಾದ ಎ.ಟಿ. ಕಟ್ಟಿಮನಿ, ಸಿಆರ್‌ಪಿ ಉಮೇಶ್ ನೇಕಾರ, ಎನ್.ಎ. ಮುಲ್ಲಾ, ಆಕ್ಸಫರ್ಡ್ ಶಾಲೆಯ ಮುಖ್ಯ ಶಿಕ್ಷಕಿ ಪ್ರಗತಿ ತಾವರೆ ಉಪಸ್ಥಿತರಿದ್ದರು. ನಂದಾ ಪಶುಪತಿಹಾಳ, ಚೇತನಾ ಹಿರೇಮಠಡ್ನಿರೂಪಿಸಿದರು. ಶಾಲೆಯ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.