ವಿಜಯಸಾಕ್ಷಿ ಸುದ್ದಿ, ಬೆಂಗಳೂರು : ಶ್ಯಾಮ್ ಪ್ರಸಾದ್ ಶಾಸ್ತ್ರಿ ಆತ್ಮಹತ್ಯೆ ಪ್ರಕಾರಣಕ್ಕೆ ಸಂಬಂಧಿಸಿದಂತೆ 1ನೇ ಆರೋಪಿ ರಾಮಚಂದ್ರಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಮತ್ತು 3ನೇ ಆರೋಪಿ ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧದ ಚಾರ್ಜ್ ಶೀಟ್ ಮೇಲ್ಮನವಿಯನ್ನು ಮಾಡಲು ಅರ್ಹ ಪ್ರಕರಣವಲ್ಲ ಎನ್ನುತ್ತಾ ಸರಕಾರ ರದ್ದು ಮಾಡಿ ಕೈ ತೊಳೆದುಕೊಂಡಿದೆ. ಇದರಿಂದ ಸರಕಾರ ಯಾರ ಹಿತವನ್ನು ಕಾಪಾಡುತ್ತದೆ ಎಂದು ಪ್ರಶ್ನಿಸುವಂತಾಗಿದೆ ಎಂದು ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಅಧ್ಯಕ್ಷ ಅಡ್ವಕೇಟ್ ತಾಹೇರ್ ಹುಸೇನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಪುನೀತ್ ಕೆರೆಹಳ್ಳಿಯಂತಹ ಸಮಾಜ ಘಾತುಕರು ಕಾನೂನು ಕೈಗೆತ್ತಿಕೊಳ್ಳಲು ಸರಕಾರದ ಇಂಥ ನಿರ್ಧಾರಗಳು ಕಾರಣ. ಕಾಂಗ್ರೆಸ್ ಕೋಮುವಾದಿಗಳಿಗೆ ಹಿತಕಾರಿಯಾಗಿ ವರ್ತಿಸುತ್ತಿದೆ. ಈ ಪ್ರಕರಣಗಳನ್ನು ಗಮನಿಸಿದರೆ ಸರಕಾರ ಯಾರ ಹಿತಾಸಕ್ತಿ ಕಾಪಾಡುತ್ತಿದೆ ಎಂದು ಅರ್ಥವಾಗುತ್ತದೆ. ತಮ್ಮನ್ನು ಚುನಾಯಿಸಿದ ಮತದಾರರಿಗೆ ದ್ರೋಹ ಬಗೆಯದೆ ಸರಕಾರ ತನ್ನ ಕರ್ತವ್ಯ ನಿರ್ವಹಿಸಲು ಮುಂದಾಗಬೇಕೆಂದು ಅವರು ಆಗ್ರಹಿಸಿದ್ದಾರೆ.