HomeDavanagereಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕೃತಿ ಕಲಿಸಿ : ರಂಭಾಪುರಿ ಶ್ರೀಗಳು

ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕೃತಿ ಕಲಿಸಿ : ರಂಭಾಪುರಿ ಶ್ರೀಗಳು

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ದಾವಣಗೆರೆ : ಶಿಕ್ಷಣದಿಂದ ಮನುಷ್ಯನ ಬುದ್ಧಿ ಶಕ್ತಿ ಬೆಳೆಯುತ್ತದೆ. ಧರ್ಮದಿಂದ ಭಾವನೆಗಳು ಬೆಳೆಯುತ್ತವೆ. ಬದುಕಿ ಬಾಳುವ ಮನುಷ್ಯನಿಗೆ ಇವೆರಡರ ಅವಶ್ಯಕತೆಯಿದೆ. ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕೃತಿ ಕಲಿಸುವ ಶಾಲೆಗಳು ಹೆಚ್ಚೆಚ್ಚು ಬೆಳೆದು ಬರಲೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಅವರು ತಾಲೂಕಿನ ಗೋಣಿವಾಡ ಪರಿಸರದಲ್ಲಿರುವ ಶ್ರೀ ಸೋಮೇಶ್ವರ ವಸತಿಯುತ ವಿದ್ಯಾಲಯದ ಮತ್ತೊಂದು ಭವ್ಯ ಶಾಲಾ ಕಟ್ಟಡ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಶಿಕ್ಷಣದಿಂದ ದೇಶದ ಪ್ರಗತಿ ಮತ್ತು ಅಭ್ಯುದಯವಿದೆ. ಶಿಕ್ಷಣದಿಂದ ಯಾರೂ ವಂಚಿತರಾಗಬಾರದು. ನಗರ ಪ್ರದೇಶದಲ್ಲಿ ಉತ್ತಮವಾದ ಶಾಲೆಗಳಿರುವುದು ಸಹಜ. ಆದರೆ ಗ್ರಾಮೀಣ ಭಾಗದಲ್ಲಿ ಭಾರತೀಯ ಸಂಸ್ಕೃತಿಯ ಜೊತೆಗೆ ಆಧುನಿಕ ಶಿಕ್ಷಣ ಕೊಡುವ ಶಾಲೆಗಳು ಕಡಿಮೆ ಇವೆ. ಇಂದಿನ ಮಕ್ಕಳೇ ಮುಂದಿನ ನಾಯಕರು.

ಮಕ್ಕಳಿಗಾಗಿ ಆಸ್ತಿ ಮಾಡದೇ ಅವರಿಗೆ ಉತ್ತಮ ಶಿಕ್ಷಣ ಕೊಡುವುದರ ಮೂಲಕ ಅವರನ್ನೇ ಆಸ್ತಿಯನ್ನಾಗಿ ಮಾಡಬೇಕಾಗಿದೆ. ಶಿಕ್ಷಣದ ಜೊತೆಗೆ ಸಂಸ್ಕಾರ ಸಂಸ್ಕೃತಿ ಕಲಿಸುವ ಜ್ಞಾನ ದೇಗುಲಗಳು ಎಲ್ಲೆಡೆ ಬೆಳೆದು ಬರಲೆಂದು ಆಶಿಸಿದ ಜಗದ್ಗುರುಗಳು, ಸಂಸ್ಥೆಯ ಕಾರ್ಯದರ್ಶಿ ಕೆ.ಎಂ. ಸುರೇಶ ಅವರು ಗ್ರಾಮೀಣ ಮಕ್ಕಳ ಬಾಳಿಗೆ ಉತ್ತಮ ಶಿಕ್ಷಣ ಕೊಡುವ ಸಂಕಲ್ಪ ತೊಟ್ಟು ಕಾರ್ಯ ಮಾಡುತ್ತಿದ್ದಾರೆ. ಕೇವಲ ಒಂದು ವರ್ಷದಲ್ಲಿ 5 ಅಂತಸ್ತಿನ ಭವ್ಯ ಕಟ್ಟಡ ನಿರ್ಮಾಣಗೊಂಡು ಇಂದು ಉದ್ಘಾಟನೆಯಾಗುತ್ತಿರುವುದು ತಮಗೆ ಸಂತೋಷ ತಂದಿದೆ ಎಂದರು.

ಸಂಸ್ಥೆಯ ಕಾರ್ಯದರ್ಶಿ ಕೆ.ಎಂ. ಸುರೇಶ ಸರ್ವರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಸಂಸ್ಥೆಯ ಅಭಿವೃದ್ಧಿಯ ಬಗೆಗೆ ಮಾತನಾಡಿದರು. ಮಾಜಿ ಸಚಿವ ಎಸ್.ಎ. ರವೀಂದ್ರನಾಥ ಹಾಗೂ ಮಾಜಿ ವಿಧಾನ ಪರಿಷತ್ ಸಚೇತಕ ಡಾ. ಎ.ಎಚ್. ಶಿವಯೋಗಿಸ್ವಾಮಿ ಪಾಲ್ಗೊಂಡು ಶ್ರೀ ರಂಭಾಪುರಿ ಜಗದ್ಗುರುಗಳ ಅಶೀರ್ವಾದ ಪಡೆದರು.

ಶಾಲಾ ಕಟ್ಟಡವನ್ನು ಶ್ರೀ ರಂಭಾಪುರಿ ಜಗದ್ಗುರುಗಳು ಇಷ್ಟಲಿಂಗ ಮಹಾಪೂಜೆಯೊಂದಿಗೆ ಉದ್ಘಾಟಿಸಿದರು. ಸಮಾರಂಭದ ನಂತರ ಪ್ರಸಾದ ವಿನಿಯೋಗ ಜರುಗಿತು.

ನೇತೃತ್ವ ವಹಿಸಿದ ಕಣ್ವಕುಪ್ಪಿ ಗವಿಮಠದ ಡಾ. ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಚಿಕ್ಕ ವಯಸ್ಸಿನಲ್ಲಿ ಮಕ್ಕಳಿಗೆ ಆದರ್ಶ ಶಿಕ್ಷಣ ಮತ್ತು ಸಂಸ್ಕಾರ ಕೊಡುವ ಅವಶ್ಯಕತೆಯಿದೆ. ಇದನ್ನು ಮನಗಂಡು ಕಾರ್ಯದರ್ಶಿ ಕೆ.ಎಂ. ಸುರೇಶ ಅವರು ಅತ್ಯಾಧುನಿಕ ಶಿಕ್ಷಣಕ್ಕೆ ಒತ್ತು ಕೊಟ್ಟು ಕಾರ್ಯ ಮಾಡುತ್ತಿರುವುದು ಗ್ರಾಮೀಣ ಭಾಗದ ಜನರ ಸೌಭಾಗ್ಯವಾಗಿದೆ ಎಂದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!