ವಿಜಯಸಾಕ್ಷಿ ಸುದ್ದಿ, ಡಂಬಳ : ಈ ಭಾಗದ ರೈತರ ಹೃದಯದಂತೆ ಕೆಲಸ ಮಾಡುವ ಕೆರೆಗಳ ಅಭಿವೃದ್ಧಿಯ ಮೂಲಕ ಪ್ರಗತಿ ಸಾಧಿಸಿ, ಕೆರೆಗಳಲ್ಲಿ ಅತಿ ಹೆಚ್ಚು ನೀರು ಸಂಗ್ರಹವಾಗುವಂತೆ ಮಾಡಿ ರೈತರ ಬಲ ಹೆಚ್ಚಿಸಲಾಗುವುದು ಎಂದು ರೋಣ ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಡಂಬಳ, ಡೋಣಿ, ಅತ್ತಿಕಟ್ಟಿ ಕೆರೆಗಳಿಗೆ ಪರಿಸರವಾದಿ ಮತ್ತು ಲೇಕ್‌ಮ್ಯಾನ್ ಆಫ್ ಇಂಡಿಯಾ ಎಂದೇ ಕರೆಯಲ್ಪಡುವ ಆನಂದ ಮಲ್ಲಿಗವಾಡ ಅವರೊಂದಿಗೆ ಇಲ್ಲಿನ ಕೆರೆಗಳಿಗೆ ಭೇಟಿ ನೀಡಿ, ಅಭಿವೃದ್ಧಿಯ ಕುರಿತು ಪರಿಶೀಲಿಸಿ ಮಾತನಾಡಿದ ಅವರು, ಕೆರೆಗಳ ಅಭಿವೃದ್ಧಿ ಸಾಧಿಸಿದರೆ ರೈತರ ಶಕ್ತಿ ವೃದ್ಧಿಯಾಗುತ್ತದೆ. ಕೆರೆಗಳಲ್ಲಿ ನೀರಿನ ಸಂಗ್ರಹ ಹೆಚ್ಚುವಂತೆ ಮಾಡಿದಲ್ಲಿ ಹಳ್ಳದ ಬಾಂದಾರಗಳಲ್ಲಿ ನೀರು ಸಂಗ್ರಹದಿಂದ ಬೋರ್‌ವೆಲ್‌ಗಳು ಬತ್ತುವುದಿಲ್ಲ. ಇದರಿಂದ ರೈತರು ಆರ್ಥಿಕವಾಗಿ ಸಬಲರಾಗಲು ಸಾಧ್ಯ. ಕೆರೆಗಳ ಅಭಿವೃದ್ಧಿಗೆ ನೀಲನಕ್ಷೆ ಸಿದ್ಧಪಡಿಸಲಾಗುತ್ತಿದೆ. ಡಂಬಳ ಗ್ರಾಮದ ರಸ್ತೆ ಅಭಿವೃದ್ಧಿಗೆ ಆದ್ಯತೆ, ಕೆರೆಯ ನೀರು ಸರಾಗವಾಗಿ ಹರಿಯುವಂತೆ ಅಭಿವೃದ್ಧಿ ಸಾಧಿಸಲಾಗುವುದು. ಡಂಬಳ ಕೆರೆಯನ್ನು ಶೀಘ್ರವೇ ಸಂಪೂರ್ಣ ಭರ್ತಿ ಮಾಡಲಾಗುವುದು ಎಂದರು.
ಗೋಣಿಬಸಪ್ಪ ಕೊರ್ಲಹಳ್ಳಿ ಮಾತನಾಡಿ, ರೈತರು ಮುಖ್ಯ ವಾಹಿನಿಗೆ ಬರಬೇಕು. ಆರ್ಥಿಕವಾಗಿ ಸ್ಥಿತಿವಂತರಾಗಬೇಕು ಎನ್ನುವ ದೃಷ್ಟಿಯಿಂದ ಕೆರೆಗಳ ಪ್ರಗತಿಗೆ ಶಾಸಕ ಜಿ.ಎಸ್. ಪಾಟೀಲರು ಮುಂದಾಗಿರುವುದು ಈ ಭಾಗದ ರೈತರ ಹರ್ಷಕ್ಕೆ ಕಾರಣವಾಗಿದೆ ಎಂದರು.
ಈ ಸಂದರ್ಭದಲ್ಲಿ ಯುಸೂಫ್ ಇಟಿ, ಮಹೇಶ ಗಡಗಿ, ಬಸುರಾಜ ಪೂಜಾರ, ಸಿದ್ದಪ್ಪ ಹಡಪದ, ಸುರೇಶ ಗಡಗಿ, ಬಸುರಡ್ಡಿ ಬಂಡಿಹಾಳ, ಶರಣು ಬಂಡಿಹಾಳ, ಮರಿಯಪ್ಪ ಸಿದ್ದಣ್ಣವರ, ಜಾಕೀರ ಮೂಲಿಮನಿ, ನಾಗೇಶ ಧರ್ಮಾಧಿಕಾರಿ, ಗವಿಸಿದ್ದಪ್ಪ ಬಿಸನಳ್ಳಿ, ನೂರಹಮ್ಮದ ಸರ್ಕವಾಸ, ಬಾಬು ಸರ್ಕವಾಸ, ಬಸವರಾಜ ಶಿರೋಳ, ಇಬ್ರಾಹಿಂ ಹೋಸಪೇಟಿ, ಅನಿಲ ಪಲ್ಲೇದ, ಮಾರುತಿ ಹೊಂಬಳ, ಮಲ್ಲಿಕಾರ್ಜುನ ಪ್ಯಾಟಿ, ರಂಗಪ್ಪ ಜೊಂಡಿ, ಇಒ ಮಂಜುನಾಥ ಹೋಸಮನಿ, ಸಣ್ಣ ನೀರಾವರಿ ಇಲಾಖೆ ಸಹಾಯಕ ಅಭಿಯಂತರ ಶರಣು ಪೂಜಾರ ಇದ್ದರು.
ಪರಿಸರವಾದಿ ಆನಂದ ಮಲ್ಲಿಗವಾಡ ಮಾತನಾಡಿ, 2016ರಲ್ಲಿ ರಾಜ್ಯದಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸಲು ಮುಚ್ಚಿರುವ ಕೆರೆಗಳ ಹೂಳು ತೆಗೆಯಲಾಗಿತ್ತು. ಇದುವರೆಗೆ 115 ಕೆರೆಗಳ ಹೂಳನ್ನು ತೆಗೆಯಲಾಗಿದೆ. 9 ವರ್ಷದಿಂದ ಜೋಳರ ಕಾಲದ ರಾಜರ ಮಾದರಿಯಲ್ಲಿ ಕೆರೆಗಳ ಪ್ರಗತಿಯನ್ನು ಸಾಧಿಸಲಾಗುತ್ತಿದೆ. ಕೊಪ್ಪಳ, ಗದಗ ಜಿಲ್ಲೆ, ರೋಣ ಕ್ಷೇತ್ರ, ಯಲಬುರ್ಗ ಭಾಗದ ಕೆರೆಗಳನ್ನು ತಾಂತ್ರಿಕವಾಗಿ ಪರಿಶೀಲಿಸಿ ನೀಲನಕ್ಷೆ ತಯಾರಿಸಲಾಗುವುದು. ರೋಣ ಶಾಸಕ ಜಿ.ಎಸ್. ಪಾಟೀಲರು ಸಂಪೂರ್ಣ ಸಹಕಾರ ನೀಡಲು ಮುಂದಾಗಿದ್ದು, ರೋಣ ಭಾಗದ ಕೆರೆಗಳ ಹೂಳೆತ್ತುವ ಮೂಲಕ ರೈತರು ಆರ್ಥಿಕವಾಗಿ ಅಭಿವೃದ್ಧಿ ಸಾಧಿಸುವ ಉದ್ದೇಶವಿದೆ ಎಂದರು.