ರಾಯಚೂರು:- ವಿಷ ಬೆರೆತ ಮಟನ್ ಊಟ ಮಾಡಿ ಒಂದೇ ಕುಟುಂಬದ ನಾಲ್ವರು ಸಾವಿಗೀಡಾದ ಘೋರ ಘಟನೆ ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನಲ್ಲಿ ನಡೆದಿದೆ. ಇನ್ನೊಬ್ಬ ಮಗಳ ಸ್ಥಿತಿ ಚಿಂತಾಜನಕವಾಗಿದೆ. ಫುಡ್ ಪಾಯಿಸನ್‌ನಿಂದ ಹೀಗಾಗಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಆದರೆ ಆತ್ಮಹತ್ಯೆ ಸಾಧ್ಯತೆಯ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.
ರಾಯಚೂರು ಜಿಲ್ಲೆ ಸಿರವಾರ ತಾಲ್ಲೂಕಿನ ಕಲ್ಲೂರು ಗ್ರಾಮದಲ್ಲಿ ಈ ದುರಂತ ನಡೆದಿದೆ. ಭೀಮಣ್ಣ (60), ಭೀಮಣ್ಣನ ಪತ್ನಿ ಈರಮ್ಮ (54), ಭೀಮಣ್ಣನ ಮಗ ಮಲ್ಲೇಶ್ (19), ಮಗಳು ಪಾರ್ವತಿ (17) ಸಾವಿಗೀಡಾದವರು. ಮತ್ತೊಬ್ಬ ಮಗಳು ಮಲ್ಲಮ್ಮ (18) ಎಂಬಾಕೆಯ ಸ್ಥಿತಿ ಗಂಭೀರವಾಗಿದೆ. ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ರಾತ್ರಿ ಇಡೀ ಕುಟುಂಬ ಮಟನ್ ಕೊಂಡು ತಂದು ಅಡುಗೆ ಮಾಡಿ ಜೊತೆಯಾಗಿ ಊಟ ಮಾಡಿತ್ತು. ಮಟನ್ ಮಾಡುವ ವೇಳೆ ಅಡುಗೆಯಲ್ಲಿ ಹಲ್ಲಿ ಬಿದ್ದಿರಬಹುದು ಎಂಬ ಶಂಕೆಯಿದೆ. ಸ್ಥಳಕ್ಕೆ ಸಿರವಾರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ತನಿಖೆ ನಡೆಸುತ್ತಿದ್ದಾರೆ.
ಇದು ಫುಡ್ ಪಾಯ್ಸನ್ ಅಲ್ಲ, ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದೂ ಕೆಲವರು ತರ್ಕಿಸಿದ್ದಾರೆ.
ಎಂಎಲ್‌ಸಿ ವರದಿ ಆಧರಿಸಿ ಫುಡ್ ಪಾಯ್ಸನ್ ಅಂತ ಪ್ರಾಥಮಿಕ ತನಿಖೆಗೆ ಪೊಲೀಸರು ಮುಂದಾಗಿದ್ದಾರೆ. ಆತ್ಮಹತ್ಯೆ ಆರೋಪದ ಹಿನ್ನೆಲೆಯಲ್ಲಿ ಆ ಬಗ್ಗೆಯೂ ಮಾಹಿತಿ ಕಲೆ ಹಾಕುತ್ತಿದ್ದಾರೆ.