ವಿಜಯಸಾಕ್ಷಿ ಸುದ್ದಿ, ಗದಗ : ಇಲ್ಲಿಯ ಬಾಲ ಕವಿಯತ್ರಿ, ಜಿಲ್ಲಾ ಅಸಾಧಾರಣ ಪ್ರತಿಭಾ ಪುರಸ್ಕಾರ ವಿಜೇತೆ ಪ್ರಣತಿ ಆರ್.ಗಡಾದ ಅವರು ಬರೆದಿರುವ ‘ನಾನು ಮಳೆಯಾದರೆ’ ಎಂಬ ಮಕ್ಕಳ ಕೃತಿಗೆ ವಿಜಯಪುರ ಜಿಲ್ಲಾ ಸಿಂದಗಿಯ ವಿದ್ಯಾ ಚೇತನ ಪ್ರಕಾಶನವು ರಾಜ್ಯ ಮಟ್ಟದಲ್ಲಿ ನೀಡುವ ರಾಜ್ಯ ಮಟ್ಟದ ಬಾಲಸಾಹಿತ್ಯ ‘ಚಿಗುರು ಪ್ರಶಸ್ತಿ’ ಪ್ರದಾನ ಸಮಾರಂಭ ಇತ್ತೀಚೆಗೆ ಜರುಗಿತು.
ಸಿಂದಗಿಯ ಸಾರಂಗಮಠದಲ್ಲಿ ಡಾ. ಪ್ರಭುಸಾರಂಗದೇವ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಜರುಗಿದ ಸಮಾರಂಭದಲ್ಲಿ ಸಿಂದಗಿಯ ಶಾಸಕ ಅಶೋಕ ಮನಗೂಳಿಯವರು ಪ್ರಣತಿ ಗಡಾದರಿಗೆ ಶಾಲು ಹೊದೆಸಿ, ಪ್ರಶಸ್ತಿ ಪ್ರದಾನ ಮಾಡಿದರು.
ಸಮಾರಂಭದ ಸಾನಿಧ್ಯ ವಹಿಸಿದ್ದ ಡಾ. ಪ್ರಭು ಸಾರಂಗದೇವ ಶಿವಾಚಾರ್ಯಸ್ವಾಮೀಜಿ, ಪ್ರಶಸ್ತಿ ಸ್ವೀಕರಿಸಿದ ಪ್ರಣತಿ ಗಡಾದ ಮಾತನಾಡಿದರು. ಅಧ್ಯಕ್ಷತೆಯನ್ನು ನಿವೃತ್ತ ಪ್ರಾಧ್ಯಾಪಕ ಪ್ರೊ. ಶಾಂತು ಹಿರೇಮಠ ವಹಿಸಿದ್ದರು.
ವೇದಿಕೆಯ ಮೇಲೆ ಪ್ರಶಸ್ತಿ ಪುರಸ್ಕೃತ ಮಕ್ಕಳ ಸಾಹಿತಿಗಳಾದ ಡಾ. ಲಲಿತಾ ಹೊಸಪ್ಯಾಟಿ, ಜಂಬುನಾಥ ಕಂಚ್ಯಾಣಿ, ಎಂ.ಎಂ. ಸಂಗಣ್ಣವರ, ವಿದ್ಯಾಚೇತನ ಪ್ರಕಾಶನದ ಸಂಚಾಲಕ ಹ.ಮ. ಪೂಜಾರ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಹಿರಿಯ ಸಾಹಿತಿಗಳಾದ ಡಾ. ಎಂ.ಎಂ. ಪಡಶೆಟ್ಟಿ, ಬಿ.ಎಂ. ಪಾಟೀಲ, ಸೋಮಶೇಖರ ವಾಲಿ, ಬಿ.ಆರ್. ನಾಡಗೌಡ, ಎಸ್.ಆರ್. ಗಣಾಚಾರಿ ಸೇರಿದಂತೆ ಅನೇಕ ಜನ ಮಕ್ಕಳ ಸಾಹಿತ್ಯಾಸಕ್ತರು ಪಾಲ್ಗೊಂಡಿದ್ದರು. ಮಕ್ಕಳ ಸಾಹಿತಿ ಎಸ್.ಎಸ್. ಸಾತಿಹಾಳ ಸ್ವಾಗತಿಸಿದರು. ರಾಜಶೇಖರ ಪೂಜಾರ ವಂದಿಸಿದರು.
ಪ್ರಶಸ್ತಿ ವಿಜೇತ ಕು. ಪ್ರಣತಿಯವರನ್ನು ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತು, ಜಿಲ್ಲಾ ಸಿರಿಗನ್ನಡ ವೇದಿಕೆ, ಜಿಲ್ಲಾ ವಚನ ಸಾಹಿತ್ಯ ಹಾಗೂ ಸಾಂಸ್ಕೃತಿಕ ಪರಿಷತ್ತು, ಜಿಲ್ಲಾ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಮುಂತಾದ ಸಂಘಟನೆಗಳು ಅಭಿನಂದಿಸಿವೆ.