ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ : ವಿದ್ಯಾರ್ಥಿ ಜೀವನವು ಭವಿಷ್ಯದ ಅತ್ಯಂತ ಪ್ರಮುಖ ಘಟ್ಟವಾಗಿದ್ದು, ಗಂಭೀರವಾದ ಚಿಂತನೆಯೊಂದಿಗೆ ಕಲಿಕಾಭ್ಯಾಸ ಮಾಡಿ ಎಂದು ಮಾನವಧರ್ಮ ವಿಜಯೀ ಭವ ಟ್ರಸ್ಟ್ ಅಧ್ಯಕ್ಷೆ ಮಂಜುಳ ತಿಳಿಸಿದರು.
ಪಟ್ಟಣದ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಡಾ. ಅಬ್ದುಲ್ ಕಲಾಂರವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಬಡ ಕುಟುಂಬದಲ್ಲಿ ಜನಿಸಿದ ಡಾ.ಕಲಾಂ, ಜಗತ್ತು ನಿಬ್ಬೆರಗಾಗುವಂತಹ ಸಾಧನೆ ಮಾಡಿದ ಅಮೂಲ್ಯ ರತ್ನವಾಗಿದ್ದಾರೆ. ಅಂತಹವರನ್ನು ಪಡೆದ ಈ ಭೂಮಿ ಪುಣ್ಯಭೂಮಿಯಾಗಿದೆ. ಮಹಾನ್ ಸಾಧಕರ ಜೀವನ ಚರಿತ್ರೆಯನ್ನು ನೀವೆಲ್ಲರೂ ಅರಿತು, ಅಳವಡಿಸಿಕೊಂಡಲ್ಲಿ ಉತ್ತಮ ಶಿಕ್ಷಣವಂತರಾಗಲು ಸಾಧ್ಯವೆಂದರು.
ಮುಖ್ಯ ಶಿಕ್ಷಕ ಮಂಜುನಾಥ ಮಾತನಾಡಿ. ವಿದ್ಯಾರ್ಥಿಗಳು ತಮ್ಮ ಕುಟುಂಬದಲ್ಲಿ ಮೌಢ್ಯತೆ ಹೋಗಲಾಡಿಸಿ ಶಿಕ್ಷಣದಿಂದಾಗುವ ಅನುಕೂಲ ಹಾಗೂ ಶಿಕ್ಷಣದಿಂದ ಸಾಧನೆಗೈದ ಕಲಾಂರಂತಹ ಜೀವನದ ಸಾಧನೆಗಳ ಬಗ್ಗೆ ಅರಿವು ಮೂಡಿಸಿದರೆ ಪ್ರತೀ ಮನೆಯು ಅಂಧಕಾರದಿಂದ ಹೊರಬಂದು ಉತ್ತಮ ಜೀವನ ಕಟ್ಟಿಕೊಳಳಲು ಸಾಧ್ಯ ಎಂದರು.
ಗಣೇಶ್, ಅರುಣ್, ಆಜಾದ್ ಭಾಷಾ, ಶಶಿಕಿರಣ, ಪ್ರಜ್ವಲ್, ಶಾಂತರಾಜ್, ಅನಿಲ್ ಬಂಡ್ರಿ, ಶ್ರಾವಣ ಮುಂತಾದವರಿದ್ದರು.