ವಿಜಯಸಾಕ್ಷಿ ಸುದ್ದಿ, ನರೇಗಲ್ : ಪಟ್ಟಣದ 3ನೇ ವಾರ್ಡಿನ ಜಕ್ಕಲಿ ರಸ್ತೆಯ ಆಶ್ರಯ ಕಾಲೋನಿಯಲ್ಲಿ ದೇವಕ್ಕ ರಾಠೋಡ ಎನ್ನುವರ ಮನೆಯ ಬಚ್ಚಲ ಮನೆಯಲ್ಲಿ ಬುಸುಗುಡುತ್ತಿದ್ದ ನಾಗರಹಾವನ್ನು ಉರಗತಜ್ಞ ಮಂಜುನಾಥ ಜ್ಯೋತಿಮಠ ರಕ್ಷಣೆ ಮಾಡಿ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.
ಆಹಾರ ಹುಡುಕಿಕೊಂಡು ಮನೆಯ ಕಡೆಗೆ ಬಂದ 4 ಅಡಿ ಉದ್ದದ ನಾಗರ ಹಾವು ಮುಖ್ಯ ದ್ವಾರದ ಮೂಲಕ ಒಳಗೆ ಬಂದಿತ್ತು. ಬಳಿಕ ಬಾಗಿಲು ತೆರೆದಿದ್ದ ಬಚ್ಚಲ ಮನೆಗೆ ಹೋಗಿದೆ. ಮನೆಯ ನಿವಾಸಿಗಳು ಬಚ್ಚಲ ಮನೆ ಕಡೆಗೆ ಹೋದಾಗ, ನಾಗರಹಾವು ಬುಸುಗುಡುತ್ತಿರುವುದು ಕೇಳಿಸಿತ್ತು. ಉರಗ ರಕ್ಷಕ ಕೋಚಲಾಪುರ ಗ್ರಾಮದ ಮಂಜುನಾಥ ಜ್ಯೋತಿಮಠ ಅವರಿಗೆ ಕರೆ ಮಾಡಿದಾಗ, ಸಂಜೆ ವೇಳೆ ಸ್ಥಳಕ್ಕೆ ಬಂದ ಉರಗ ರಕ್ಷಕ ಮಂಜುನಾಥ ಜ್ಯೋತಿಮಠ ಬಳಿಕ ಅವರು ಹಾವನ್ನು ಮಾನಿಟರ್ ಮಾಡಿ ಸುರಕ್ಷಿತವಾಗಿ ಹಿಡಿದು ಅರಣ್ಯ ಪ್ರದೇಶಕ್ಕೆ ಬಿಡುವ ಮೂಲಕ ಮನೆಯವರ ಆತಂಕವನ್ನ ದೂರ ಮಾಡಿದ್ದಾರೆ.
ಹಾವುಗಳು ಕಪ್ಪೆ, ಮಿಡತೆ, ಇಲಿಯಂತಹ ಆಹಾರವನ್ನು ಅರಸಿ ಬರುವುದರಿಂದ ಈ ರೀತಿ ಜಂತುಗಳು ಮನೆಯ ಕೊಠಡಿಗೆ ಸೇರುವುದಕ್ಕೆ ಕಾರಣವಾಗಿದೆ. ಮನೆಯ ಸುತ್ತಲು ಹುಲ್ಲು ಬೆಳೆಯದಂತೆ, ಗಿಡಗಂಟಿಗಳು ಇರದಂತೆ ಹಾಗೂ ಕಸ ಇರದಂತೆ ಶುಚಿತ್ವ ಕಾಪಾಡಿಕೊಂಡರೆ ಹಾವುಗಳು ಜನವಸತಿ ಪ್ರದೇಶದಲ್ಲಿ ಕಂಡು ಬರುವುದು ಕಡಿಮೆ ಎಂದು ಅವರು ಸಲಹೆ ನೀಡಿದರು.
ಸಾರ್ವಜನಿಕರು ಯಾವುದೇ ಹಾವು ಮನೆ ಒಳಗೆ ಅಥವಾ ಕಂಪೌಂಡನಲ್ಲಿ ಕಂಡುಬಂದರೆ ಕೊಲ್ಲದೆ, ಅವುಗಳನ್ನು ರಕ್ಷಿಸಿ ಅವನ್ನು ಅರಣ್ಯಕ್ಕೆ ಬಿಡಬೇಕು. ಇದು ನಾವು ನಿಸರ್ಗಕ್ಕೆ ತೋರುವ ಗೌರವವಾಗಿದೆ ಎಂದು ಮಂಜುನಾಥ ಜ್ಯೋತಿಮಠ ತಿಳಿಸಿದರು.



