ವಿಜಯಸಾಕ್ಷಿ ಸುದ್ದಿ ಗಂಗಾವತಿ
ರಾಜ್ಯ ಸರ್ಕಾರವು ಮರಾಠ ಸಮುದಾಯದ ಅಭಿವೃದ್ಧಿಗಾಗಿ ಪ್ರಾಧಿಕಾರ ಸ್ಥಾಪನೆಗೆ ಅಸ್ತು ಎಂದಿರುವುದು ತೀವ್ರ ಖಂಡನೀಯವಾಗಿದೆ ಎಂದು ಕರವೇ ಕೊಪ್ಪಳ ಜಿಲ್ಲಾಧ್ಯಕ್ಷರಾದ ಪಂಪಣ್ಣ ನಾಯಕ ಕಿಡಿ ಕಾರಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಮರಾಠರು ಕರ್ನಾಟಕದ ನಾಡು – ನುಡಿ , ನೆಲ – ಜಲ , ಭಾಷೆಯ ವಿಷಯದಲ್ಲಿ ಕನ್ನಡಿಗರ ವಿರುದ್ಧ ಧ್ವನಿ ಎತ್ತುವ ಮೂಲಕ ಗಡಿ ನಾಡು ಬೆಳಗಾವಿಯಲ್ಲಿ ಮಹಾರಾಷ್ಟ್ರದ ಜೊತೆಗೆ ಕೈಜೋಡಿಸುವ ಮೂಲಕ ಕನ್ನಡ ನಾಡಿಗೆ ತೀವ್ರವಾಗಿ ಅವಮಾನವೆಸಗಿರುತ್ತಾರೆ . ಇಂತಹ ಸಮಾಜದ ಅಭಿವೃದ್ಧಿಗಾಗಿ ನಮ್ಮ ರಾಜ್ಯ ಸರ್ಕಾರ ೫೦ ಕೋಟಿ ರೂಪಾಯಿಗಳ ಅನುದಾನವನ್ನು ಮೀಸಲಿಟ್ಟು ಮರಾಠ ಸಮುದಾಯ ಅಭಿವೃದ್ಧಿ ಪ್ರಾಧಿಕಾರಕ್ಕೆ ಅಸ್ತು ಎಂದಿರುವುದು ತೀವ್ರ ವಿಷಾದನೀಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಹಾರಾಷ್ಟ್ರ ಏಕೀಕರಣ ಸಮಿತಿ ಹಾಗೂ ಶಿವಸೇನೆ ಸಂಘಟನೆಗಳು ಹುಟ್ಟಿಕೊಂಡಿರುವುದೇ ಕನ್ನಡಿಗರ ವಿರುದ್ಧ ಧ್ವನಿ ಎತ್ತಲು. ರಾಜ್ಯದ ಗಡಿ ವಿಷಯದಲ್ಲಿ ಮಹಾರಾಷ್ಟ್ರವು ಬೆಳಗಾವಿಯನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದು, ಇಲ್ಲಿಯವರೆಗೆ ಹಿಂದಿನ ಸರ್ಕಾರಗಳು ವೊಟ್ ಬ್ಯಾಂಕ್ ರಾಜಕಾರಣ ಮಾಡುವ ಮೂಲಕ ಮೂಲೆಗುಂಪಾಗಿವೆ. ತಮ್ಮ ಸರ್ಕಾರವು ಕೂಡ ಇದೇ ದಾರಿ ಹಿಡಿದಿರುವುದು ತುಂಬಾ ನೋವಿನ ಸಂಗತಿಯಾಗಿದೆ. ಪ್ರತಿ ಬಾರಿ ನಮ್ಮ ಕನ್ನಡ ರಾಜ್ಯೋತ್ಸವ ದಿನದಂದು ಕಪ್ಪುಬಾವುಟ ಪ್ರದರ್ಶಿಸುವ ಇಂತಹ ಸಂಘಟನೆಗಳು ಹಾಗೂ ಸಮುದಾಯಕ್ಕೆ ನಮ್ಮ ರಾಜ್ಯದ ಅನುದಾನದ ಅವಶ್ಯಕತೆ ಇದೆಯೇ? ಎಂದು ಅವರು ಪ್ರಶ್ನಿಸಿದ್ದಾರೆ.
ಕನ್ನಡಿಗರಿಗೆ ಅವಮಾನ, ದಬ್ಬಾಳಿಕೆ, ದೌರ್ಜನ್ಯ ಎಲ್ಲವನ್ನು ಮರೆತು ಮರಾಠ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸುತ್ತಿರುವುದನ್ನು ಕೂಡಲೇ ರಾಜ್ಯ ಸರ್ಕಾರ ಇದೇ ನವೆಂಬರ್ -೨೭ ರೊಳಗೆ ಕೈಬಿಡಬೇಕು . ಇಲ್ಲವಾದಲ್ಲಿ ನಮ್ಮ ಕರವೇ ಸಂಘಟನೆಯು ರಾಜ್ಯಾಧ್ಯಂತ ಮುಂದಿನ ದಿನಗಳಲ್ಲಿ ಉಗ್ರವಾದ ಪ್ರತಿಭಟನೆಗಳನ್ನು ಹಮ್ಮಿಕೊಳ್ಳುವುದರ ಜೊತೆಗೆ ಕರ್ನಾಟಕ ಬಂದ್ ಮಾಡಿ ಹೋರಾಟ ಮಾಡಲಾಗುವುದು ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಮರಾಠ ಸಮುದಾಯದ ಅಭಿವೃದ್ಧಿ ಪ್ರಾಧಿಕಾರದ ಸ್ಥಾಪನೆಗೆ ಕರವೇ ತೀವ್ರ ಖಂಡನೆ
Advertisement