ವಿಜಯಸಾಕ್ಷಿ ಸುದ್ದಿ, ಗದಗ : ಕಲ್ಕತ್ತಾದ ಆರ್ ಜೇಖರ್ ಹಾಸ್ಪಿಟಲ್‌ನಲ್ಲಿ ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಹತ್ಯೆ ಖಂಡಿಸಿ ಐಎಂಎ ಗದಗ ಹಾಗೂ ಜಿಮ್ಸ್ ವೈದ್ಯರು, ವೈದ್ಯ ವಿದ್ಯಾರ್ಥಿಗಳು ಮಂಗಳವಾರ ಸಾಯಂಕಾಲ ಪ್ರತಿಭಟನೆ ನಡೆಸಿದರು.
ನಗರದ ಐಎಂಎ ಕಚೇರಿಯಿಂದ ಗಾಂಧಿ ವೃತ್ತದವರೆಗೆ ಕೈಗೆ ಕಪ್ಪು ಬಟ್ಟೆ ಧರಿಸಿ, ಮೇಣದ ಬತ್ತಿ ಹಿಡಿದು ಶಾಂತಯುತವಾಗಿ ಪ್ರತಿಭಟನೆಯನ್ನು ನಡೆಸಿ, ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ತಮ್ಮ ಆಕ್ರೋಶ ಹೊರಹಾಕಿದರು.
ಈ ವೇಳೆ ಮಾತನಾಡಿದ ಐಎಂಎ ಅಧ್ಯಕ್ಷ ಡಾ. ಪಲ್ಲೇದ, ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಹತ್ಯೆಯನ್ನು ನಾವು ಖಂಡಿಸುತ್ತೇವೆ. ಪ್ರತಿಭಟನೆಯಲ್ಲಿ ನೂರಾರು ವೈದ್ಯರು ಹಾಗೂ ವೈದ್ಯ ವಿದ್ಯಾರ್ಥಿಗಳು ಭಾಗಿಯಾಗಿದ್ದಾರೆ. ವಿದ್ಯಾರ್ಥಿನಿ ಡಾ. ಮೌಮಿತಾ ಕೊಲೆ ಮಾಡಿದ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದರು.
ವೈದ್ಯರಿಗೆ ಸುರಕ್ಷತೆ ನೀಡುವ ಕ್ರಮವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೈಗೊಳ್ಳಬೇಕು. ಇಂತಹ ಘಟನೆ ಎಲ್ಲಿಯಾದರೂ ಆಗಬಹುದು. ಹಿಂದೆಯೂ ಈ ರೀತಿಯ ಹೀನ ಕೃತ್ಯಗಳು ನಡೆದಿವೆ. ಮುಂದೆ ಆಗಬಾರದು. ಈಗ ಶಾಂತಯುತವಾಗಿ ಪ್ರತಿಭಟಿಸಿದ್ದು, ಕ್ರಮ ಕೈಗೊಳ್ಳದಿದ್ದರೆ, ಕಠಿಣ ಹೋರಾಟ ಮಾಡಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದರು.