ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ : ಸರಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳ ಸಂಪೂರ್ಣ ಮಾಹಿತಿಯನ್ನು ಸಭೆಗೆ ತರದೇ ಇದ್ದರೆ ಹೇಗೆ? ಇನ್ನೂ ಕೆಲ ಇಲಾಖೆಗಳ ಸಹಾಯಕರು ಸಭೆಗೆ ಆಗಮಿಸಿದ್ದೀರಿ, ಹೀಗಾದರೆ ಸಭೆ ಹೇಗೆ ನಡೆಸುವುದು ಎಂದು ಜಿ.ಪಂ ಮುಖ್ಯ ಯೋಜನಾಧಿಕಾರಿ ಹಾಗೂ ತಾ.ಪಂ ಆಡಳಿತಾಧಿಕಾರಿ ಎನ್.ಕೆ. ನಿರ್ಮಲಾ ಅಸಮಾಧಾನ ವ್ಯಕ್ತಪಡಿಸಿದರು.
ಅವರು ಬುಧವಾರ ಶಿರಹಟ್ಟಿಯ ತಾ.ಪಂ ಸಭಾಭವನದಲ್ಲಿ ಜರುಗಿದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾಟಾಚಾರಕ್ಕೆ ಬಂದು ಹೋಗಬೇಡಿ: ತಾಲೂಕಿನ ಎಲ್ಲ ಇಲಾಖೆಯ ಅನುಷ್ಠಾನಾಧಿಕಾರಿಗಳು ಸಭೆಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಎಲ್ಲ ಯೋಜನೆಗಳ ಸಂಪೂರ್ಣ ಮಾಹಿತಿಯನ್ನು ನೀಡಬೇಕು. ಕೆಲವು ಇಲಾಖೆಯವರು ಸರಿಯಾಗಿ ಮಾಹಿತಿಯನ್ನೇ ನೀಡುತ್ತಿಲ್ಲ. ಇದರಿಂದ ಹೇಗೆ ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ, ಕಾಟಾಚಾರಕ್ಕೆ ಸಭೆಗೆ ಬಂದು ಹೋಗಬೇಡಿ. ಕಚೇರಿಯಲ್ಲಿದ್ದರೆ ಕೆಲಸ ಮಾಡಬೇಕಾಗುತ್ತದೆ ಎಂದು ಸಭೆಗೆ ಹಾಜರಾಗಿ ಕಾಲಹರಣ ಮಾಡುವುದು ಸರಿಯಲ್ಲ ಎಂದು ಅಧಿಕಾರಿಗಳ ಕಾರ್ಯವೈಖರಿಗೆ ಆಡಳಿತಾಧಿಕಾರಿ ಬೇಸರ ವ್ಯಕ್ತಪಡಿಸಿದರು.
ನೋಟೀಸ್ ನೀಡುವುದಕ್ಕೆ ಸೀಮೀತವಾದ ಸಭೆ: ತಾಲೂಕಿನ ಪ್ರಗತಿ ಬಗ್ಗೆ ನಡೆಯಬೇಕಿದ್ದ ಸಾಮಾನ್ಯ ಸಭೆಯು ಅಧಿಕಾರಿಗಳ ಗೈರು, ಸಹಾಯಕರ ಉಪಸ್ಥಿತಿ, ಪ್ರಗತಿ ವರದಿ ನೀಡದೇ ಇರುವುದು, ಅಪೂರ್ಣ ಮಾಹಿತಿ ನೀಡಿರುವುದು ಸೇರಿದಂತೆ ಹಲವು ಸಮಸ್ಯೆಗಳ ನಡುವೆಯೇ ಪ್ರಾರಂಭವಾದ ಸಾಮಾನ್ಯ ಸಭೆಯು ಅಂತಿಮವಾಗಿ ನೋಟೀಸ್ ನೀಡುವುದಕ್ಕೆ ಮಾತ್ರ ಸೀಮೀತವಾದಂತಾಯಿತೇ ಎಂಬ ಭಾವನೆ ವ್ಯಕ್ತವಾಗುತ್ತಿತ್ತು.
ಆಡಳಿತಾಧಿಕಾರಿಗಳು, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಸಭೆಗೆ ಮುಂಚಿತವಾಗಿಯೇ ನೋಟೀಸ್ ನೀಡಿದರೂ ಸಹ ಮತ್ತೆ ಮತ್ತೆ ಸಭೆಯಲ್ಲಿ ಇಂತಹುದಕ್ಕೆ ಸಮಯ ವ್ಯರ್ಥವಾಗುತ್ತಿರುವದಂತೂ ಸತ್ಯ.
ತಾಪಂ ಇಓ ಎಸ್.ಎಸ್. ಕಲ್ಮನಿ, ಎಡಿಎ ರೇವಣೆಪ್ಪ ಮನಗೂಳಿ, ಬಿಸಿಎಂನ ಮರಿಗೌಡ ಸುರಕೋಡ, ಆರ್‌ಎಫ್‌ಓ ಕೌಶಿಕ ದಳವಾಯಿ, ರಾಮಪ್ಪ ಪೂಜಾರ, ಪಿಆರ್‌ಇಡಿ ಮಾರುತಿ ರಾಠೋಡ ಮುಂತಾದ ಅಧಿಕಾರಿಗಳು ಉಪಸ್ಥಿತರಿದ್ದರು.
ತಾ.ಪಂನಲ್ಲಿ ನಡೆಯುವ ಪ್ರಗತಿ ಪರಿಶೀಲನಾ ಸಭೆಗೆ ಇನ್ನು ಮುಂದೆ ಸರಕಾರದ ಗ್ಯಾರಂಟಿ ಯೋಜನೆಗಳ ಸಂಪೂರ್ಣ ಮಾಹಿತಿಯನ್ನು ಕಡ್ಡಾಯವಾಗಿ ತರಬೇಕು ಎಂದು ಹೆಸ್ಕಾಂ, ಶಿಶು ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ಆಹಾರ ಮತ್ತು ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ನೋಟೀಸ್ ಜಾರಿ ಮಾಡುವಂತೆ ತಾ.ಪಂ ಇಓ ಅವರಿಗೆ ಸೂಚಿಸಿದರು.