ವಿಜಯಸಾಕ್ಷಿ ಸುದ್ದಿ, ಗದಗ : ನಮ್ಮ ಸ್ವಾತಂತ್ರ್ಯ ಸೇನಾನಿಗಳ ತ್ಯಾಗ, ಬಲಿದಾನ, ಶ್ರಮ ಸಮರ್ಪಣಾ ಭಾವದ ಫಲವಾಗಿ ನಮಗೆ ಸ್ವಾತಂತ್ರ್ಯ ದೊರಕಿದೆ ಎಂದು ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ನಗರದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ಜಿಲ್ಲಾಡಳಿತದಿಂದ ಜರುಗಿದ 78ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯಲ್ಲಿ ಸಾರ್ವಜನಿಕ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿ, ಶತಮಾನಗಳ ದಾಸ್ಯತ್ವವನ್ನು ಕಳಚಿ ಸ್ವತಂತ್ರ್ಯವಾದ ಭಾರತ, ತನ್ನ 77 ವರ್ಷಗಳನ್ನು ಪೂರ್ಣಗೊಳಿಸಿ, ಇಂದು 78ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ ಎಂದರು.
ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ತೋರಿದ ವಿನೂತನವಾದ ಸತ್ಯ, ಅಹಿಂಸೆ ಎಂಬ ಅಸ್ತ್ರಗಳನ್ನು ಹಿಡಿದು, ಸತ್ಯಾಗ್ರಹ ಮಾರ್ಗ ತುಳಿದು ಬ್ರಿಟೀಷ್ ಆಡಳಿತದ ಗುಂಡಿಗೆ ಎದೆ ಒಡ್ಡಿ, ಲಾಠಿ ಏಟು ತಿಂದು ಜೈಲಿನಲ್ಲಿ ನೊಂದು, ಬ್ರಿಟಿಷರು ನೀಡಿದ ನೋವಿನಲ್ಲಿ ಬೆಂದು, ಅವರ್ಣನೀಯ ಕಷ್ಟಗಳನ್ನು ಅನುಭವಿಸಿ, ದೇಶವನ್ನು ಗುಲಾಮಗಿರಿಯ ಸಂಕೋಲೆಯಿಂದ ಮುಕ್ತಗೊಳಿಸಿದರು. ಸತ್ಯಾಗ್ರಹವು ಸ್ವಾತಂತ್ರ್ಯ ಸಂಗ್ರಾಮ ಮತ್ತು ತದನಂತರ ಸ್ವಾತಂತ್ರ್ಯೋತ್ತರ ಭಾರತದಲ್ಲಿ ಪ್ರಬಲ ಅಸ್ತ್ರವಾಗಿ ಪರಿಣಮಿಸಿ ಅನೇಕ ಆಂದೋಲನ ಮತ್ತು ಚಳವಳಿಗಳಿಗೆ ಯಶ ತಂದುಕೊಡುವಲ್ಲಿ ಪರಿಣಾಮಕಾರಿಯಾದ ಪಾತ್ರ ನಿಭಾಯಿಸಿತ್ತು ಎಂದು ಹೇಳಿದರು.
ನರಗುಂದದ ಬಾಬಾ ಸಾಹೇಬ, ಮುಂಡರಗಿಯ ಭೀಮರಾವ, ಡಂಬಳದ ಕೆಂಚನಗೌಡ್ರು, ಅನಂತರಾವ ಜಾಲಿಹಾಳ, ಡಾ. ವಾಸುದೇವರಾವ ಉಮಚಗಿ, ಬೆಟಗೇರಿಯ ತ್ರಿಮಲ್ಲೆ, ಮಳೇಕರ, ಜಯರಾಮಾಚಾರ್ಯ ಮಳಗಿ, ಡಂಬಳದ ಶ್ರೀನಿವಾಸರಾವ್ ಕಳ್ಳಿ, ತಿಪ್ಪಣ್ಣ ಶಾಸ್ತ್ರಿ, ಅಂದಾನಪ್ಪ ದೊಡ್ಡಮೇಟಿ, ಕೌತಾಳ ವೀರಪ್ಪ, ಕೆ.ಎಚ್. ಪಾಟೀಲರು ಸೇರಿ ಅಸಂಖ್ಯ ಸ್ವಾತಂತ್ರ್ಯ ಸೇನಾನಿಗಳು ದೇಶಕ್ಕಾಗಿ ಸರ್ವತ್ಯಾಗ ಮಾಡಿದ್ದು ನೆನೆದರೆ ಹೃದಯದಲ್ಲಿ ಹೆಮ್ಮೆಯ ಪ್ರವಾಹ ಹರಿಯುವುದು. ದೇಶಭಕ್ತ ಮೈಲಾರ ಮಹಾದೇವಪ್ಪ ಅವರ ನೇತೃತ್ವದಲ್ಲಿ ಕೋಗನೂರು, ಶಿಗ್ಲಿ, ಹೆಬ್ಬಾಳ, ನಾಗರಮಡುವು, ವರವಿ, ಹೊಸೂರ, ಅಂಕಲಿ, ಮೊದಲಾದ ಗ್ರಾಮಗಳ ಸ್ವಾತಂತ್ರ್ಯ ಹೋರಾಟಗಾರರು ಚಳವಳಿಯಲ್ಲಿ ಧುಮುಕಿ ಅಪಾರ ತ್ಯಾಗ ಮಾಡಿದ್ದಾರೆ ಎಂದು ಸ್ಮರಿಸಿದರು.
ಸಮಾರಂಭದಲ್ಲಿ ವಿ.ಪ ಸದಸ್ಯ ಎಸ್.ವಿ. ಸಂಕನೂರ, ನಗರಾಬಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕಬರಸಾಬ ಬಬರ್ಜಿ, ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತ್ ಎಸ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು, ಗಣ್ಯರು, ಸಾರ್ವಜನಿಕರು, ಅಪಾರ ಸಂಖ್ಯೆಯ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
1942ರಲ್ಲಿ, ಬ್ರಿಟೀಷರೇ ಭಾರತ ಬಿಟ್ಟು ತೊಲಗಿ ಚಳವಳಿಯಲ್ಲಿ ಗದಗ ಜಿಲ್ಲೆ ಪೂರ್ಣವಾಗಿ ತೊಡಗಿಸಿಕೊಂಡಿತ್ತು. ಡಾ. ಬಿ.ಜಿ. ಹುಲಗಿ, ಶಂಕ್ರಪ್ಪ ಗುಡ್ಡದ, ಇಸ್ಮಾಯಿಲ್ ಸಾಹೇಬ ಕಲ್ಲೂರ ರಾಮಾಚಾರಿ, ವೆಂಕಟೇಶ ಮಾಗಡಿ, ಕೋಗನೂರು ನಿಂಗಪ್ಪ ಮೊದಲಾದವರು ಕಠಿಣ ಶಿಕ್ಷೆ ಅನುಭವಿಸಿದರು. 1931ರಲ್ಲಿ ಜವಹಾರಲಾಲ ನೆಹರು ಅವರು ಗದಗ ಮತ್ತು ಜಕ್ಕಲಿ ಗ್ರಾಮಕ್ಕೆ ಭೇಟಿ ನೀಡಿದಾಗ ಅಂದಿನ ಹೋರಾಟದ ನಾಯಕತ್ವ ವಹಿಸಿದ್ದ ಅಂದಾನೆಪ್ಪ ದೊಡ್ಡಮೇಟಿ ಅವರು ನೆಹರೂ ಅವರಿಗೆ ಬೆಳ್ಳಿಯ ತಕ್ಕಡಿಯನ್ನು ಅರ್ಪಿಸಿದ್ದು ವಿಶೇಷ ಘಟನೆಯಾಗಿದೆ.
– ಎಚ್.ಕೆ. ಪಾಟೀಲ.
ಜಿಲ್ಲಾ ಉಸ್ತುವಾರಿ ಸಚಿವರು.
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಗದಗ ಜಿಲ್ಲೆಯ ಪಾತ್ರ ಅವಿಸ್ಮರಣೀಯವಾದುದು. ಅಂದು ಲೋಕಮಾನ್ಯ ಬಾಲಗಂಗಾಧರ ತಿಲಕ, ಪಂಡಿತ ಜವಾಹರಲಾಲ ನೆಹರು, ರಾಷ್ಟ್ರಪಿತ ಮಹಾತ್ಮ ಗಾಂಧೀಯವರನ್ನು ಬರಮಾಡಿಕೊಂಡ ಗದಗ, ರಚನಾತ್ಮಕ ಕೆಲಸಗಳ ಮೂಲಕ ಸ್ವಾತಂತ್ರ್ಯ ಹೋರಾಟಕ್ಕೆ ಬಲ ತುಂಬಿತ್ತು. ಚರಕ ಮನೆಮನೆಯ ಮಾತಾಗಿದ್ದಿತು. ಸ್ವದೇಶಿ ಆಂದೋಲನವನ್ನು ಉಸಿರಾಗಿಸಿಕೊಂಡ ನಮ್ಮ ಹಿರಿಯರು ಹತ್ತಾರು ಶೈಕ್ಷಣಿಕ ಸಂಸ್ಥೆಗಳನ್ನು ಕಟ್ಟಿದರು. ದೇಸೀ ಕ್ರೀಡೆಗೆ ಪ್ರೋತ್ಸಾಹ ನೀಡಿದರು. ಚಾರಿತ್ರ್ಯವಂತರಾಗಿ ದೇಶಕ್ಕಾಗಿ ಸಮರ್ಪಿತರಾದರು ಎಂದು ಎಚ್.ಕೆ. ಪಾಟೀಲ ಹೇಳಿದರು.