ಮಂಡ್ಯ:- ಸಕ್ಕರೆ ನಾಡು ಮಂಡ್ಯದಲ್ಲಿ ಇನ್ನೂ ಹೆಣ್ಣುಭ್ರೂಣ ಪತ್ತೆ, ಹತ್ಯೆ ದಂಧೆ ವ್ಯಾಪಕವಾಗಿ ನಡೆಯುತ್ತಿದ್ದು, ಮಾವಿನಕೆರೆ ತೋಟದ ಮನೆಯಲ್ಲಿ ರೆಡ್ಹ್ಯಾಂಡ್ ಆಗಿ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.
ಪಾಂಡವಪುರ ಸರ್ಕಾರಿ ಹೆಲ್ತ್ ಕ್ವಾರ್ಟರ್ಸ್ನಲ್ಲಿ ನಡೆಯುತ್ತಿದ್ದ ಹೆಣ್ಣು ಭ್ರೂಣ ಹತ್ಯೆ ಪ್ರಕರಣ ಮೇ ತಿಂಗಳಲ್ಲಿ ಭಾರಿ ಸದ್ದು ಮಾಡಿತ್ತು. ಇದೀಗ ಆ ವಿಚಾರ ಸಂಬಂಧಿತ ಚರ್ಚೆ ತಣ್ಣಗಾಗುತ್ತಿರುವ ಹೊತ್ತಿನಲ್ಲಿಯೇ ಆಘಾತಕಾರಿ ಮಾಹಿತಿಯೊಂದು ಹೊರಬಿದ್ದಿದೆ.
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಮಾವಿನಕೆರೆ ಗ್ರಾಮದ ತೋಟದ ಮನೆಯಲ್ಲಿ ಹೆಣ್ಣುಭ್ರೂಣ ಪತ್ತೆ ದಂಧೆ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಭ್ರೂಣಲಿಂಗ ಪತ್ತೆ ಮಾಡುತ್ತಿದ್ದಾಗಲೇ ಆರೋಗ್ಯ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದರಿಂದ ಆರೋಪಿಗಳಿಬ್ಬರು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಗುರುವಾರ ತಡರಾತ್ರಿ ಡಿಹೆಚ್ಒ ಡಾ. ಮೋಹನ್ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿ ವೇಳೆ, ಮನೆಯಲ್ಲಿ ಅಬಾರ್ಷನ್ ಕಿಟ್, ಸ್ಕ್ಯಾನಿಂಗ್ ಮಷಿನ್ ಪತ್ತೆಯಾಗಿದೆ. ಇದೇ ವೇಳೆ ಸ್ಥಳದಲ್ಲಿ ಹಾಸನ ಮೂಲದ ಗರ್ಭಿಣಿಯೂ ಇದ್ದರು. ಭ್ರೂಣಲಿಂಗ ಪತ್ತೆಗಾಗಿ ಗರ್ಭಿಣಿಯನ್ನು ಕರೆತರಲಾಗಿತ್ತು. ಗರ್ಭಿಣಿ ಮೂರನೇ ಹೆಣ್ಣುಭ್ರೂಣ ಅಬಾರ್ಷನ್ಗೆ ಬಂದಿದ್ದರು ಎಂಬುದೂ ಗೊತ್ತಾಗಿದೆ.
ಸದ್ಯ ಅಬಾರ್ಷನ್ ಕಿಟ್, ಸ್ಕ್ಯಾನಿಂಗ್ ಯಂತ್ರವನ್ನು ಸೀಜ್ ಮಾಡಿದ ಪೊಲೀಸರು, ಗರ್ಭಿಣಿಯ ಪತಿಯನ್ನು ಬಂಧಿಸಿದ್ದಾರೆ. ಸ್ಕ್ಯಾನಿಂಗ್ ಮಾಡುತ್ತಿದ್ದ ಪ್ರಮುಖ ಆರೋಪಿ ಅಭಿಷೇಕ್ ಪರಾರಿಯಾಗಿದ್ದಾನೆ. ಮನೆ ಮಾಲೀಕ ಧನಂಜಯ್ ಆರೋಗ್ಯ ಇಲಾಖೆ ಗ್ರೂಪ್ ಡಿ ಸಿಬ್ಬಂದಿ ಎನ್ನಲಾಗಿದೆ.