ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ
ಡಾ.ಅಂಬೇಡ್ಕರ್ ಅಭಿವೃದ್ಧಿ ನಿಗಮಕ್ಕೆ ಮಾರಾಟ ಮಾಡಿದ್ದ ಜಮೀನಿನ ಹಣ ಮಂಜೂರು ಮಾಡಲು ಲಂಚದ ಬೇಡಿಕೆ ಇಟ್ಟಿದ್ದ ನಿಗಮದ ಮ್ಯಾನೇಜರ್ ಎಚ್ ವೈ ರುದ್ರಾಕ್ಷಿ, ಡ್ರೈವರ್ ಫಕ್ಕೀರೇಶ್ ಪೂಜಾರ, ಹಾಗೂ ಮಧ್ಯವರ್ತಿ ಕೋಲ್ಡ್ ಡ್ರಿಂಕ್ಸ್ ಅಂಗಡಿಯ ಮಾಲಿಕ ಪ್ರತೀಕ ಬೇವಿನಕಟ್ಟಿ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಮಂಜುನಾಥ್ ಸಜ್ಜನ ಎಂಬುವವರು ಗದಗ ತಾಲೂಕಿನ ಹಿರೇಹಂದಿಗೋಳ ಗ್ರಾಮದ ಹದ್ದಿನಲ್ಲಿ ಇದ್ದ 20 ಎಕರೆ ಜಮೀನನ್ನು 1ಕೋಟಿ, 2ಲಕ್ಷ 57,500 ರೂ,ಗಳಿಗೆ ಡಾ.ಅಂಬೇಡ್ಕರ್ ಅಭಿವೃದ್ಧಿ ನಿಗಮಕ್ಕೆ ಮಾರಾಟ ಮಾಡಿದ್ದರು.
ಅದಕ್ಕೆ ಈಗಾಗಲೇ ನಿಗಮದಿಂದ 90ಲಕ್ಷ ಹಣ ಕೊಡಲಾಗಿತ್ತು. ಉಳಿದ 12ಲಕ್ಷ 57,500 ಹಣ ಕೊಡಲು ನಿಗಮದ ಮ್ಯಾನೇಜರ್ ಎಚ್ ವೈ ರುದ್ರಾಕ್ಷಿ 40 ಸಾವಿರ ರೂ, ಲಂಚ ಕೇಳಿದ್ದರು. ಇವತ್ತು ಫಿರ್ಯಾದಿ ಮಂಜುನಾಥ್ ಸಜ್ಜನ ಹಣ ಕೊಡಲು ಬಂದಾಗ ಡ್ರೈವರ್ ಫಕ್ಕೀರೇಶ್ ನ ಬಳಿ ಕೊಡಲು ಹೇಳಿದ್ದಾರೆ. ಫಕ್ಕೀರೇಶ್ ಕೋಲ್ಡ್ ಡ್ರಿಂಕ್ಸ್ ಅಂಗಡಿಯ ಮಾಲೀಕ ಪ್ರತೀಕ ಬೇವಿನಕಟ್ಟಿ ಬಳಿ ಕೊಡಲು ಹೇಳಿದ್ದಾನೆ. ಜಿಲ್ಲಾಡಳಿತ ಭವನದಲ್ಲಿ ಇರುವ ಕಚೇರಿಯಲ್ಲಿ ಪ್ರತೀಕ ಹಣ ಪಡೆಯುತ್ತಿದ್ದಾಗ ಎಸಿಬಿ ಡಿವೈಎಸ್ಪಿ ವಾಸುದೇವರಾಮ್ ಎನ್ ನೇತೃತ್ವದಲ್ಲಿ ದಾಳಿ ನಡೆಸಿ ಬಂಧಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಇನ್ಸ್ಪೆಕ್ಟರ್ ಗಳಾದ ವಾಯ್ ಎಸ್ ಧರಣಾನಾಯ್ಕ್, ರವೀಂದ್ರ ಕುರಬಗಟ್ಟಿ, ಸಿಬ್ಬಂದಿಗಳಾದ ಎಮ್ ಎಮ್ ಅಯ್ಯನಗೌಡರ್, ಆರ್ ಎಚ್ ಹೆಬಸೂರು, ಎನ್ ಎಸ್ ತಾಯಣ್ಣವರ, ವೀರೇಶ್ ಜೋಳದ, ಐ ಸಿ ಕರಿಗಾರ ಹಾಗೂ ತಾರಪ್ಪ ಇದ್ದರು.