ಲಕ್ನೋ:- ಉತ್ತರ ಪ್ರದೇಶದಲ್ಲಿ ರೈಲು ದುರಂತ ಸಂಭವಿಸಿ ಭಾರೀ ಅನಾಹುತ ತಪ್ಪಿದೆ. ಇಂದು ಸಬರ್‌ಮತಿ ಎಕ್ಸ್‌ಪ್ರೆಸ್ ರೈಲಿನ ಕನಿಷ್ಠ 20 ಬೋಗಿಳು ಹಳಿ ತಪ್ಪಿದ್ದು, ಅದೃಷ್ಟವಶಾತ್ ಘಟನೆಯಲ್ಲಿ ಯಾರಿಗೂ ಯಾವುದೇ ರೀತಿಯ ಗಾಯಗಳಾಗಿಲ್ಲ.
ವಾರಣಾಸಿಯಿಂದ ಅಹಮದಾಬಾದ್‌ಗೆ ತೆರಳುತ್ತಿದ್ದ ಸಬರ್‌ಮತಿ ಎಕ್ಸ್‌ಪ್ರೆಸ್ ರೈಲಿನ 20 ಬೋಗಿಗಳು ಇಂದು ಮುಂಜಾನೆ ಉತ್ತರ ಪ್ರದೇಶದ ಕಾನ್ಪುರ ಮತ್ತು ಭೀಮಸೇನ್ ನಿಲ್ದಾಣಗಳ ನಡುವೆ ಹಳಿ ತಪ್ಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಳಿಯಲ್ಲಿ ಬಿದ್ದಿದ್ದ ಬಂಡೆಗೆ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.
ʼʼಘಟನೆಯಲ್ಲಿ ಯಾವುದೇ ಪ್ರಾಣಹಾನಿ, ಗಾಯ ಉಂಟಾಗಿಲ್ಲ. ಪ್ರಯಾಣಿಕರನ್ನು ಕಾನ್ಪುರಕ್ಕೆ ತಲುಪಿಸಲು ಭಾರತೀಯ ರೈಲ್ವೆ ಇಲಾಖೆ ಸ್ಥಳಕ್ಕೆ ಬಸ್ಸುಗಳನ್ನು ಕಳುಹಿಸಿದೆ ಮತ್ತು ಅಲ್ಲಿಂದ ಅಹಮದಾಬಾದ್‌ಗೆ ಪ್ರಯಾಣ ಮುಂದುವರಿಸಲು ವ್ಯವಸ್ಥೆ ಮಾಡಲಾಗಿದೆʼʼ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸುದ್ದಿ ತಿಳಿದ ಕೂಡಲೇ ಅವಘಡ ನಡೆದ ಸ್ಥಳಕ್ಕೆ ಅಗ್ನಿಶಾಮಕ ವಾಹನ ಮತ್ತು ಆ್ಯಂಬುಲೆನ್ಸ್ ಧಾವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.