ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ : ಕೋಲ್ಕತ್ತಾದಲ್ಲಿ ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ಖಂಡಿಸಿ ಪಟ್ಟಣದಲ್ಲಿ ವೈದ್ಯರು ಹಾಗೂ ಔಷಧಿ ವ್ಯಾಪಾರಸ್ಥರು ಪ್ರತಿಭಟನೆ ನಡೆಸಿ ಶನಿವಾರ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಕೋಲ್ಕತ್ತಾದ ಆರ್‌ಜಿಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ 31 ವರ್ಷದ ವೈದ್ಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿದೆ. ರೋಗಿಗಳ ಜೀವ ರಕ್ಷಣೆಗಾಗಿ ಶ್ರಮಿಸುವ ವೈದ್ಯರನ್ನೇ ಅತ್ಯಾಚಾರ ಹಾಗೂ ಕೊಲೆ ಮಾಡುವಷ್ಟು ವಾತವಾರಣ ಕೆಟ್ಟಿರುವುದು ವಿಪರ್ಯಾಸ. ಹೀಗಾಗಿ ಸರ್ಕಾರಗಳು ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಉತ್ತಮ ವಾತಾವರಣ ನಿರ್ಮಿಸಲು ಮುಂದಾಗಬೇಕಿದೆ ಎಂದು ಆಗ್ರಹಿಸಿದರು.
ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ ಹಾಗೂ ಕೊಲೆ ಖಂಡಿಸಿ ಪಟ್ಟಣದಲ್ಲಿ ಆಸ್ಪತ್ರೆಗಳಲ್ಲಿ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಪರಿಣಾಮ ಕೆಲ ರೋಗಿಗಳು ಚಿಕಿತ್ಸೆಗಾಗಿ ಪರದಾಡಿದ ಘಟನೆ ನಡೆಯಿತು.
ಪ್ರತಿಭಟನೆಯಲ್ಲಿ ವೈದ್ಯರಾದ ಪಾರ್ವತಿಬಾಯಿ ಚವಡಿ, ಆರ್.ಎಸ್. ಜೀರೆ, ಬಿ.ವ್ಹಿ. ಕಂಬಳ್ಯಾಳ, ಸಿ.ವಿ. ಮಾಳಗಿ, ಶರಣು ಗಾಣಿಗೇರ ಹಾಗೂ ಉಮೇಶ ಮೆಣಸಗಿ, ಗೋವಿಂದ ಮಂತ್ರಿ, ನಿಖಿಲ್ ರಾಜಪುರೋಹಿತ, ವಿಶ್ವನಾಥ ಪಾಗಿ, ಮೋಹನ ಕನಕೇರಿ, ಅಶೋಕ ಮುದೇನೂರ ಮುಂತಾದವರಿದ್ದರು.