ವಿಜಯಸಾಕ್ಷಿ ಸುದ್ದಿ, ಗದಗ : ಅಕ್ಷರ ಕಲಿತವರೆಲ್ಲರೂ ವಿದ್ಯಾವಂತರೆನಿಸಿಕೊಳ್ಳುವುದಿಲ್ಲ. ಯಾರು ಅಕ್ಷರಗಳ ಜೊತೆಗೆ ಸಂಸ್ಕಾರವನ್ನು ಪಡೆಯುತ್ತಾರೋ ಅವರೇ ನಿಜವಾದ ವಿದ್ಯಾವಂತರು ಎಂದು ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ನುಡಿದರು.
ಅವರು ಇತ್ತೀಚೆಗೆ ನಗರದ ತೋಂಟದಾರ್ಯ ಶಿಕ್ಷಣ ಸಂಸ್ಥೆಯ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಾ ಮಾತನಾಡಿ, ಧಾರ್ಮಿಕ ಸಂಸ್ಥೆಗಳು ಪ್ರಾರಂಭಿಸಿರುವ ವಿದ್ಯಾಸಂಸ್ಥೆಗಳಲ್ಲಿ ಶಿಕ್ಷಣದ ಜೊತೆಗೆ ಸಂಸ್ಕಾರವನ್ನೂ ನೀಡಲಾಗುತ್ತದೆ. ತೋಂಟದಾರ್ಯ ಶಿಕ್ಷಣ ಸಂಸ್ಥೆ ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ಬಿತ್ತುವ ಕಾರ್ಯವನ್ನು ಮಾಡುತ್ತಿದ್ದು, ಈ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಭಾಗ್ಯಶಾಲಿಗಳಾಗಿದ್ದಾರೆ ಎಂದರು.
ಪರಿಶ್ರಮಕ್ಕೆ ಮತ್ತೊಂದು ಪರ್ಯಾಯವಿಲ್ಲ. ಹಾಗಾಗಿ ವಿದ್ಯಾರ್ಥಿ ಹಂತದಲ್ಲಿ ಕಷ್ಟಪಟ್ಟು ಜ್ಞಾನ ಸಂಪಾದನೆ ಮಾಡಿದರೆ ಭವಿಷ್ಯದಲ್ಲಿ ನೆಮ್ಮದಿಯ ಜೀವನವನ್ನು ಸಾಗಿಸಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ಮಹಾನ್ ನಾಯಕರನ್ನು ಆದರ್ಶವಾಗಿಟ್ಟುಕೊಂಡು ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ತೋಂಟದಾರ್ಯ ಶಾಲೆಯಲ್ಲಿ ವಿದ್ಯಾರ್ಥಿಗಳು ಸಮಾಜದಲ್ಲಿ ಉತ್ತಮರಾಗಿ ಬದುಕಲು ಬೇಕಾದ ಎಲ್ಲಾ ಗುಣಗಳನ್ನು ಕಲಿಯುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ತೋಂಟದಾರ್ಯ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಕೊಟ್ರೇಶ ಮೆಣಸಿನಕಾಯಿ, ಸಂಸ್ಥೆಯ ಸದಸ್ಯರಾದ ಅಮರೇಶ ಅಂಗಡಿ, ಲಿಂಗರಾಜಗೌಡ ಪಾಟೀಲ, ತೋಂಟದ ಸಿದ್ಧೇಶ್ವರ ಪ.ಪೂ ಕಾಲೇಜು ಪ್ರಾಚಾರ್ಯ ವೈ.ಎಸ್. ಮತ್ತೂರ ಸೇರಿದಂತೆ ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.