ಶಿರಹಟ್ಟಿ ಪಟ್ಟಣ ಪಂಚಾಯತ್: ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಇಂದು

0
Countdown to Women's Durbar in Shirahatti Town Panchayat | Election today
Spread the love

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ : ಶಿರಹಟ್ಟಿ ಪಟ್ಟಣ ಪಂಚಾಯಿತಿಯ 10ನೇ ಅವಧಿಗಾಗಿ ನಿಗದಿಪಡಿಸಿದ ಮೀಸಲಾತಿಯಂತೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳಾ ವರ್ಗಕ್ಕೆ ಮೀಸಲಾಗಿದ್ದು, ಸಹಜವಾಗಿಯೇ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಲ್ಲಿ ತೀವ್ರ ಪೈಪೋಟಿ ಮೂಡಿದೆ. ಹೀಗಾಗಿ ಪಟ್ಟಣ ಪಂಚಾಯಿತಿಯಲ್ಲಿ ಮಹಿಳಾ ಅಧ್ಯಕ್ಷ-ಉಪಾಧ್ಯಕ್ಷರ ದರ್ಬಾರ್‌ಗೆ ಕ್ಷಣಗಣನೆ ಆರಂಭವಾಗಿದ್ದು, ಕೊನೆಯ ಕ್ಷಣದಲ್ಲಿ ಯಾರಿಗೆ ಅಧ್ಯಕ್ಷ ಗದ್ದುಗೆ ಒಲಿಯುತ್ತದೆ ಎಂಬ ಕುತೂಹಲ ಮೂಡಿಸಿದೆ.

Advertisement

ಪ.ಪಂ ವ್ಯಾಪ್ತಿಯಲ್ಲಿ ಬರುವ 18 ವಾರ್ಡ್ಗಳಲ್ಲಿ ಕಾಂಗ್ರೆಸ್‌ನ 11 ಸದಸ್ಯರಿದ್ದು, ಬಿಜೆಪಿ 7 ಸದಸ್ಯರನ್ನು ಹೊಂದಿದೆ. ಕಾಂಗ್ರೆಸ್ ಪಕ್ಷದಲ್ಲಿ ಹಿಂದಿನ ಅವಧಿಯಲ್ಲಿ ಗಂಗಮ್ಮ ಆಲೂರ ಮತ್ತು ನೀಲವ್ವ ಹುಬ್ಬಳ್ಳಿ ಅಧಿಕಾರ ನಡೆಸಿದ್ದರು. ಇದೀಗ ಅದೇ ಪಕ್ಷದ ವಾರ್ಡ್ ನಂ.15ರ ದೇವಕ್ಕ ಗುಡಿಮನಿ, ವಾರ್ಡ್ ನಂ.11ರ ದಾವಲಬಿ ಮಾಚೇನಹಳ್ಳಿ ಹಾಗೂ ಈ ಹಿಂದೆ ಉಪಾಧ್ಯಕ್ಷೆಯಾಗಿದ್ದ ನೀಲವ್ವ ಹುಬ್ಬಳ್ಳಿ ಅವರು ಸಹ ಅಧ್ಯಕ್ಷ ಸ್ಥಾನದ ರೇಸ್‌ನಲ್ಲಿದ್ದು, ಈ ಮೂವರು ಸದಸ್ಯರು ಪಕ್ಷದ ಮುಖಂಡರುಗಳಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಪಕ್ಷದ ಮುಖಂಡರು ಯಾವುದೇ ಗೊಂದಲವಿಲ್ಲದೇ ಅಧ್ಯಕ್ಷ-ಉಪಾಧ್ಯಕ್ಷರನ್ನು ಒಮ್ಮತದಿಂದ ಆಯ್ಕೆ ಮಾಡುವುದಕ್ಕೆ ಈಗಾಗಲೇ ಹಲವು ಸುತ್ತಿನ ಮಾತುಕತೆ ನಡೆಸಿರುವ ಬಗ್ಗೆ ಕೇಳಿಬರುತ್ತಿದೆ.

ಪ.ಪಂ ಅಧಿಕಾರ ಹಿಡಿಯುವುದಕ್ಕೆ ಬಿಜೆಪಿಗೆ ಸಂಖ್ಯಾಬಲದ ಕೊರತೆಯಿದ್ದು, ಸಧ್ಯ 7 ಸದಸ್ಯರನ್ನು ಹೊಂದಿದೆ. ಜೊತೆಗೆ ಶಾಸಕರ ಮತ್ತು ಸಂಸದರ ಬೆಂಬಲ ಸಿಕ್ಕರೂ ಸಹ ಬಹುಮತದ ಕೊರತೆಯಾಗುವ ಸಾಧ್ಯತೆಯಿದೆ. ಆದಾಗ್ಯೂ ಈ ಹಿಂದೆ ಪಟ್ಟಣ ಪಂಚಾಯಿತಿಯಲ್ಲಿ ಎರಡೂ ಪಕ್ಷಗಳು ನಡೆಸಿದ ಕುದುರೆ ವ್ಯಾಪಾರವನ್ನು ಪಟ್ಟಣದ ಜನತೆ ಮರೆತಿಲ್ಲ.

ಶಿರಹಟ್ಟಿ ಪ.ಪಂನಲ್ಲಿ ಇದೇ ಮೊದಲ ಬಾರಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಎರಡೂ ಸ್ಥಾನಗಳು ಮಹಿಳೆಯರಿಗೆ ಲಭಿಸಿದ್ದು, ಇದನ್ನು ಸದುಪಯೋಗಪಡಿಸಿಕೊಳ್ಳುವುದಕ್ಕೆ ಅರ್ಹ ಸದಸ್ಯರು ಸಾಧ್ಯವಿರುವ ಎಲ್ಲ ಕಸರತ್ತುಗಳನ್ನು ಮಾಡುತ್ತಿದ್ದಾರೆ. ಮೀಸಲಾತಿ ವಿಳಂಬದಿAದಾಗಿ ಬೇಸತ್ತು ಹೋಗಿದ್ದ ಸದಸ್ಯರ ಮುಖದಲ್ಲಿ ಇದೀಗ ಮಂದಹಾಸ ಮೂಡಿದ್ದು, ಮತ್ತೆ ಪಟ್ಟಣದ ಅಭಿವೃದ್ಧಿ ದೃಷ್ಟಿಯಿಂದ ಮುನ್ನಲೆಗೆ ಬರಲು ಕಾಯುತ್ತಿದೆ. ಪಟ್ಟಣ ಪಂಚಾಯಿತಿಯ ಹೊಸ ಮನ್ವಂತರಕ್ಕೆ ಮಹಿಳಾ ಅಧ್ಯಕ್ಷ-ಉಪಾಧ್ಯಕ್ಷರು ಯಾರಾಗಲಿದ್ದಾರೆ ಎಂಬ ಕುತೂಹಲ ಸಾರ್ವಜನಿಕರಲ್ಲಿದೆ.

ಈ ಕುರಿತು ಪ್ರತಿಕ್ರಿಯಿಸಿದ ಬಿಜೆಪಿ ನಗರ ಘಟಕದ ಅಧ್ಯಕ್ಷ ನಾಗರಾಜ ಲಕ್ಕುಂಡಿ, ಬಹುಮತದ ಕೊರತೆ ಇರುವ ಕಾರಣ ಪಟ್ಟಣದ ಅಭಿವೃದ್ಧಿಗೆ ಸಹಕಾರ ನೀಡಲಾಗುವುದು ಎಂದರು.

ಶಿರಹಟ್ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹುಮಾಯೂನ್ ಮಾಗಡಿ ಪ್ರತಿಕ್ರಿಯೆ ನೀಡಿ, ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲರು ಮತ್ತು ಪಕ್ಷದ ಜಿಲ್ಲಾಧ್ಯಕ್ಷ ಜಿ.ಎಸ್. ಪಾಟೀಲರ ಮಾರ್ಗದರ್ಶನದಲ್ಲಿ ಅಧ್ಯಕ್ಷ-ಉಪಾಧ್ಯಕ್ಷರನ್ನು ಅಂತಿಮಗೊಳಿಸಲಾಗುವುದು. ಎಂದರು.

ಪಟ್ಟಣ ಪಂಚಾಯಿತಿಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಆ.20ರಂದು ಚುನಾವಣೆ ನಡೆಯಲಿದ್ದು, ಮುಂಜಾನೆ 10ರಿಂದ 12 ಗಂಟೆವರೆಗೆ ನಾಮಪತ್ರ ಸ್ವೀಕೃತಿ ಮತ್ತು ಮಧ್ಯಾಹ್ನ 2 ಗಂಟೆಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಸಭೆಯನ್ನು ನಿಗದಿಪಡಿಸಲಾಗಿದೆ.
– ಅನಿಲ ಬಡಿಗೇರ.
ಚುನಾವಣಾಧಿಕಾರಿ, ತಹಸೀಲ್ದಾರರು.


Spread the love

LEAVE A REPLY

Please enter your comment!
Please enter your name here