ಬಿಜೆಪಿಯಲ್ಲೀಗ ಮನೆಯೊಂದು ಮೂರು ಬಾಗಿಲು!

Vijayasakshi (Gadag News) :

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಬೆಂಗಳೂರು

ದಿನ ಕಳೆದಂತೆ ರಾಜ್ಯ ಬಿಜೆಪಿಯಲ್ಲಿ ಬಣ ರಾಜಕೀಯ ಹುಟ್ಟಿಕೊಳ್ಳುತ್ತಿದ್ದು, ಆಂತರಿಕ ಭಿನ್ನಾಭಿಪ್ರಾಯಗಳಿಂದ ಬಾಜಪದಲ್ಲೀಗ ಮನೆಯೊಂದು ಮೂರು ಬಾಗಿಲು ಎಂಬಂತಾಗಿದೆ.

ಸಚಿವ ಸಂಪುಟ ಪುನಾರಚನೆ ಗೊಂದಲವುಂಟಾಗಿದ್ದು, ಸಚಿವಾಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಇದರಿಂದ ಯಾರನ್ನ ಮಂತ್ರಿ ಮಾಡಬೇಕು, ಯಾರನ್ನ ಸಂಪುಟದಿಂದ ಕೈ ಬಿಡಬೇಕು ಎಂಬುವುದು ಬಿಜೆಪಿ ಹೈಕಮಾಂಡ್ ಗೆ ತಲೆಬಿಸಿ ತಂದಿದೆ.

ಕ್ಯಾಬಿನೆಟ್ ಸಭೆಯ ನೆಪದಲ್ಲಿ ಸಚಿವಾಕಾಂಕ್ಷಿಗಳು ಸಾಲು ಸಾಲು ಸಭೆ ನಡೆಸುತ್ತಿದ್ದು, ಯಡಿಯೂರಪ್ಪ ಅವರಿಗೆ ಕಣ್ಣು ತೆರೆಯುತ್ತಿಲ್ಲ. ಬದಲಾಗಿ ಮಂತ್ರಿ ಸ್ಥಾನ ಕೊಡುವಂತೆ ಪಟ್ಟು ಹಿಡಿದಿದ್ದಾರೆ. ಇದರ ಮಧ್ಯೆ ವಲಸಿಗ ಮತ್ತು ಮೂಲ ಬಿಜೆಪಿಗರು ಎಂಬ ಚರ್ಚೆ ಶುರುವಾಗಿದೆ.

ಸಂಪುಟ ವಿಸ್ತರಣೆಯಲ್ಲಿ ಮೂಲ ಬಿಜೆಪಿಗರಿಗೆ ಆದ್ಯತೆ ನೀಡಬೇಕು ಎಂಬ ಮಾತುಗಳು ಹರಿದಾಡುತ್ತಿವೆ. ಇತ್ತ ಸರ್ಕಾರ ರಚನೆಗೆ ಕಾರಣವಾಗಿರುವ ವಲಸಿಗ ಬಿಜೆಪಿಗರಾದ ಎಂಟಿಬಿ ನಾಗರಾಜ್, ಎಚ್.ವಿಶ್ವನಾಥ್ ಹಾಗೂ ಆರ್.ಶಂಕರ್ ಮಂತ್ರಿ ಮಾಡಿ ಕೊಟ್ಟ ಮಾತು ಉಳಿಸಿಕೊಳ್ಳುವಂತೆ ಯಡಿಯೂರಪ್ಪ ಅವರಿಗೆ ಒತ್ತಡ ಹೇರುತ್ತಿದ್ದಾರೆ.

ಅಲ್ಲದೇ, ಯಡಿಯೂರಪ್ಪಗೆ ವಿಪಕ್ಷಗಳಿಗಿಂತ ಸಿಎಂ ಪಕ್ಷದೊಳಗಿನ ಆಂತರಿಕ ಭಿನ್ನಾಭಿಪ್ರಾಯಗಳೇ ದೊಡ್ಡ ತಲೆನೋವಾಗಿ ಪರಿಣಮಿಸಿವೆ. ಸರ್ಕಾರದಲ್ಲಿ ಅಭಿವೃದ್ಧಿ ಕೆಲಸಗಳಿಗಿಂತ ಆಂತರಿಕ ಕಿತ್ತಾಟವೇ ಹೆಚ್ಚಾಗಿದೆ. ಸ್ವಯಂಕೃತ ಅಪರಾಧದಿಂದಲೇ ಬಿಜೆಪಿ ಆಡಳಿತ ಪಾತಾಳಕ್ಕೆ ಕುಸಿಯುತ್ತಿದ್ದು, ಕ್ರಮೇಣ ಜನರ ವಿಶ್ವಾಸ ಕಳೆದುಕೊಳ್ಳುತ್ತಿದೆಯಾ ಎಂಬ ಶಂಕೆ ವ್ಯಕ್ತವಾಗುತ್ತಿದೆ.

2008 ರಲ್ಲೂ ಆಂತರಿಕ ಕಚ್ಚಾಟದಿಂದ ಯಡಿಯೂರಪ್ಪ ನೇತೃತ್ವದ ಬಿಜೆಪಿ‌ ಸರ್ಕಾರ ಪತನಗೊಂಡಿತ್ತು. ಬಿಎಸ್ ವೈ ಸರ್ಕಾರ ಮತ್ತೆ ಅದೇ ಹಾದಿ ತುಳಿಯುತ್ತಿದೆಯಾ ಎಂಬುದೇ ಸದ್ಯದ ಕುತೂಹಲವಾಗಿದ್ದು ಮುಂದೇನಾಗುತ್ತೆ ಎಂಬುದನ್ನು ಕಾದು ನೋಡಬೇಕು.

ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTube ಅನುಸರಿಸಿ.

Leave A Reply

Your email address will not be published.