ದಾವಣಗೆರೆ:- ಜಿಂದಾಲ್ಗೆ ಜಮೀನು ಕೊಡುವುದರಲ್ಲಿ ಹಿರಿಯ ಅಧಿಕಾರಿಗಳ ಕೈವಾಡ ಇದೆ ಎಂದು ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಹರಿಹರದಲ್ಲಿ ಜಿಂದಾಲ್ ಸಂಸ್ಥೆಗೆ ಸರ್ಕಾರದಿಂದ ಜಮೀನು ಕೊಡುವ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಿಂದಾಲ್ಗೆ ಜಮೀನು ಕೊಡುವುದರಲ್ಲಿ ಹಿರಿಯ ಅಧಿಕಾರಿಗಳ ಕೈವಾಡ ಇದೆ ಎಂದಿದ್ದಾರೆ.
ಅಧಿಕಾರಿಗಳು ಹೇಳಿದಂತೆ ಸಚಿವ ಸಂಪುಟ ಒಪ್ಪಿಕೊಂಡಿದೆ. ಬಿಎಸ್ ಯಡಿಯೂರಪ್ಪ ಸರ್ಕಾರದಲ್ಲಿ ಸಂಪುಟಕ್ಕೆ ಬಂದು ವಾಪಸ್ ಹೋಗಿದೆ. ಆಗ ಕಾಂಗ್ರೆಸ್ ಪಕ್ಷದವರೇ ತೀವ್ರವಾಗಿ ವಿರೋಧ ಮಾಡಿದ್ದರು. ಕಾಂಗ್ರೆಸ್ನವರು ಹಾಡೋದು ಒಂದು ಮಾಡೋದು ಒಂದು. ಕಾಂಗ್ರೆಸ್ನವರು ಬಂಡವಾಳಶಾಹಿ ಪರವಾಗಿರುವವರು.
ಬೆಲೆ ಬಾಳುವ ಜಮೀನನ್ನು ಇಂದಿನ ದರಕ್ಕೆ ಮಾರಾಟ ಮಾಡದೇ ಕಡಿಮೆ ಬೆಲೆಗೆ ಕೊಟ್ಟಿದ್ದಾರೆ. ಇದರಿಂದ ಕರ್ನಾಟಕ ಸರ್ಕಾರಕ್ಕೆ ಬಹಳ ದೊಡ್ಡ ನಷ್ಟ ಆಗಿದೆ. ಕೂಡಲೇ ಇದನ್ನು ನಿಲ್ಲಿಸಬೇಕು. ಮಾರುಕಟ್ಟೆ ಬೆಲೆಯ ದರವನ್ನು ನಿಗದಿ ಮಾಡಿ ಕೊಡಬೇಕು. ಇಲ್ಲದಿದ್ದರೆ ಅವ್ಯವಹಾರ ನಡೆದಿದೆ ಎಂದು ಸಂಶಯ ಬರುತ್ತೆ ಎಂದು ಕಿಡಿಕಾರಿದ್ದಾರೆ.
ವಾಲ್ಮೀಕಿ ಹಗರಣದಲ್ಲಿ ದೋಷಾರೋಪಣ ಪಟ್ಟಿಯಲ್ಲಿ ಪ್ರಮುಖ ಹೆಸರನ್ನು ಕೈಬಿಡಲಾಗಿದೆ ಎಂಬ ವಿಚಾರವಾಗಿ ಮಾತನಾಡಿದ ಅವರು, ನಮಗೆ ಗೊತ್ತಿತ್ತು ಎಸ್ಐಟಿ ಮಾಡಿರುವುದು ಪ್ರಕರಣ ಮುಚ್ಚಿ ಹಾಕಲು. ಸಾಕ್ಷ್ಯ ಇದ್ದಾಗಲೂ ಎಸ್ಐಟಿ ಪ್ರಮುಖ ಆರೋಪಿಗಳನ್ನು ಬಿಟ್ಟಿದೆ ಅಂದರೆ ದೋಷರೋಪಣ ಪಟ್ಟಿ ಸತ್ಯದಿಂದ ಕೂಡಿಲ್ಲ. ಸಮಾನಾಂತರವಾಗಿ ಇಡಿ ತನಿಖೆ ನಡೆಸುತ್ತಿದೆ. ಇಡಿ ದೋಷರೋಪಣ ಪಟ್ಟಿಯಲ್ಲಿ ತಪ್ಪಿತಸ್ಥರು ಬರಲಿದ್ದಾರೆ ಎಂದಿದ್ದಾರೆ.