ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ತಾಲೂಕಾ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘ, ಕರ್ನಾಟಕ ಹಿರಿಯ ನಾಗರಿಕರ ಹಾಗೂ ನಿವೃತ್ತ ನೌಕರರ ಸಂಘ ಇವರ ಸಹಯೋಗದಲ್ಲಿ ಖಾಸಗಿ ಸುದ್ದಿ ವಾಹಿನಿಯ ಎರಡನೇ ವಾರ್ಷಿಕೋತ್ಸವ ಹಾಗೂ ನೂತನ ಸಂಸದ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರಿಗೆ ಗೌರವ ಸಮರ್ಪಣೆ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಆಗಸ್ಟ್ 25ರ ಸಂಜೆ 4 ಗಂಟೆಗೆ ವಿನಾಯಕ ನಗರದಲ್ಲಿರುವ ಸೋಮೇಶ್ವರ ಇಂಡಸ್ಟೀಜ್ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪಂಚಮಸಾಲಿ ಸಂಘದ ತಾಲೂಕಾಧ್ಯಕ್ಷ ಮಂಜುನಾಥ ಮಾಗಡಿ ಹೇಳಿದರು.
ಅವರು ಪಟ್ಟಣದಲ್ಲಿ ಶುಕ್ರವಾರ ಈ ಕುರಿತು ಕರೆಯಲಾಗಿದ್ದ ಸಭೆಯಲ್ಲಿ ಮಾತನಾಡಿ, ಹಿರಿಯ ನಾಗರಿಕರ ಬದುಕು-ಬವಣೆ ಕುರಿತು ಹಾಗೂ ಅವರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸರಕಾರದ ಗಮನ ಸೆಳೆಯುವದು, ಅವರ ಬೇಡಿಕೆಗಳ ಕುರಿತು, ಇರುವ ಸೌಲಭ್ಯಗಳನ್ನು ಅವರಿಗೆ ತಲುಪಿಸುವ ಉದ್ದೇಶವಾಗಿದೆ.
ಇದೇ ಸಂದರ್ಭದಲ್ಲಿ ಸ್ಟಾರ್ ಆಫ್ ಲಕ್ಷ್ಮೇಶ್ವರ ಖಾಸಗಿ ಸುದ್ದಿ ವಾಹಿನಿಯ ದ್ವಿತೀಯ ವಾರ್ಷಿಕೋತ್ಸವವನ್ನು ಸಹ ಆಚರಿಸಲಾಗುವದು. ಸಾರ್ವಜನಿಕರು ಈ ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡುವದಾಗಿ ಹೇಳಿದರು.
ಹಿರಿಯ ನಾಗರಿಕ ಚಂಬಣ್ಣ ಬಾಳಿಕಾಯಿ, ಡಿ.ಬಿ.ಬಳಿಗಾರ ಮಾತನಾಡಿ ಹಿರಿಯರನ್ನು ಗೌರವಿಸುವ ಮೂಲಕ ಅವರ ನೋವಿಗೆ ಸ್ಪಂದಿಸುವ ಕಾರ್ಯವನ್ನು ಮಾಡುವದು ಇದರ ಉದ್ದೇಶವಾಗಿದೆ ಎಂದರು. ಸುದ್ದಿ ವಾಹಿನಿ ಸಂಪಾದಕ ಮೆಹಬೂಬ್ ಮುಲ್ಲಾ ಮಾತನಾಡಿ, ಆ.25ರಂದು ನಡೆಯಲಿರುವ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಹೂವಿನಶಿಗ್ಲಿ ವಿರಕ್ತಮಠದ ಚನ್ನವೀರ ಮಹಾಸ್ವಾಮಿಗಳು ವಹಿಸಲಿದ್ದು, ಮಂಜುನಾಥ ಮಾಗಡಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಡಾ.ಚಂದ್ರು ಲಮಾಣಿ ಸೇರಿದಂತೆ ಮಾಜಿ ಶಾಸಕರು, ಮುಖಂಡರು ಆಗಮಿಸಲಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿ.ಎಸ್. ಜಾಲಗಾರ, ಸಿ.ಆರ್. ಲಕ್ಕುಂಡಿಮಠ, ಎನ್.ವ್ಹಿ. ಹೇಮಗಿರಿಮಠ, ಅಭಯ ಜೈನ್ ಮುಂತಾದವರಿದ್ದರು.