ವಿಜಯಸಾಕ್ಷಿ ಸುದ್ದಿ, ಸಿಂಧನೂರು : ಇಲ್ಲಿನ ಬಸ್ ನಿಲ್ದಾಣದಲ್ಲಿ ಸುಮಾರು ಎರಡು ದಿನಗಳಿಂದ ಓಡಾಡುತ್ತ, ಮನನೊಂದು ಆತ್ಮಹತ್ಯೆಯ ನಿರ್ಧಾರಕ್ಕೆ ಬಂದಿದ್ದ ಗದುಗಿನ ಬನಪ್ಪ ಲೋಕಪ್ಪ ಗೌರಿ(79) ಎನ್ನುವ ವೃದ್ಧನನ್ನು ರಕ್ಷಣೆ ಮಾಡಿ ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಕಾರುಣ್ಯ ನೆಲೆ ವೃದ್ಧಾಶ್ರಮದಲ್ಲಿ ಷಾ ಮಕಾಂದರ್ ಸಮಿತಿಯ ಅಧ್ಯಕ್ಷರಾದ ಉಸ್ಮಾನ್ ಷಾ ಮಕಾಂದರ್ ನೇತೃತ್ವದಲ್ಲಿ ಆಶ್ರಯ ನೀಡಲಾಯಿತು.
ಈ ಸಂದರ್ಭದಲ್ಲಿ ಉಸ್ಮಾನ್ ಷಾ ಮಕಾಂದರ್ ಮಾತನಾಡಿ, ಬಸ್ ನಿಲ್ದಾಣದಲ್ಲಿ ನನ್ನ ಹೆಸರು ಕೇಳಿಕೊಂಡು ಹುಡುಕಿಕೊಂಡು ಬಂದಿರುವ ಬನಪ್ಪ ಇವರ ಎಲ್ಲಾ ವಿವರವನ್ನು ತಿಳಿದುಕೊಂಡಾಗ ಗದಗ-ಬೆಟಗೇರಿಯ ನಿವಾಸಿಗಳೆಂದು ಗೊತ್ತಾಯಿತು. ಆದರೆ ಇವರಿಗೆ ನೆಲೆಯಿಲ್ಲದೆ ಅಲ್ಲಲ್ಲಿ ತಾತ್ಕಾಲಿಕ ಆಶ್ರಯ ಪಡೆಯುತ್ತಿರುವುದು ಗೊತ್ತಾಗಿ ತುಂಬಾ ನೋವಾಯಿತು. ಇಂತಹ ಹಿರಿಯರನ್ನು, ಅನಾಥರನ್ನು ರಕ್ಷಣೆ ಮಾಡುವ ಕಾರುಣ್ಯ ಕುಟುಂಬ ನಮ್ಮ ಸಿಂಧನೂರಿನಲ್ಲಿ ಇರುವಾಗ ಯಾರೂ ಅನಾಥರಾಗಲಾರರು ಎಂದರು.
ಕಾರುಣ್ಯ ಆಶ್ರಮದ ಸಲುವಾಗಿ ನಾವು ಕೂಡ ನಿರಂತರ ಜೋಳಿಗೆ ಹಾಕಿ ಸೇವಾ ಕಾರ್ಯದಲ್ಲಿ ಭಾಗವಹಿಸುತ್ತೇವೆ. ನಿಮ್ಮ ಕೈಯಿಂದಾದ ಸಹಾಯ-ಸಹಕಾರವನ್ನು ನಮ್ಮ ಕಾರುಣ್ಯಾಶ್ರಮಕ್ಕೆ ನೀಡಿ ಎಂದು ವಿನಂತಿಸಿದರು.
ಆಶ್ರಮದ ಆಡಳಿತಾಧಿಕಾರಿ ಡಾ.ಚನ್ನಬಸವ ಸ್ವಾಮಿ ಮಾತನಾಡಿ, ನೆಲೆ ಇಲ್ಲದ ಜೀವಿಗೆ ನೆಲೆ ಕಲ್ಪಿಸಿಕೊಟ್ಟ ಉಸ್ಮಾನ್ ಷಾ ಮಕಾಂದರ್ ಕಾರ್ಯ ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಆಶ್ರಮದ ಸಿಬ್ಬಂದಿಗಳಾದ ಸುಜಾತ ಹಿರೇಮಠ, ಶರಣಮ್ಮ, ಸಿದ್ದಯ್ಯ ಸ್ವಾಮಿ, ಮಲ್ಲಯ್ಯ ಸ್ವಾಮಿ ಮುಂತಾದವರಿದ್ದರು.