ಮಂಗಳೂರು:- ಆಸ್ತಿಗಾಗಿ 83 ವರ್ಷದ ನಿವೃತ್ತ ಶಿಕ್ಷಕನ ಬರ್ಬರ ಕೊಲೆ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಳಿಯ, ಮೊಮ್ಮಗನನ್ನು ಅರೆಸ್ಟ್ ಮಾಡಲಾಗಿದೆ.
ನಿವೃತ್ತ ಶಿಕ್ಷಕ ಕೊಲೆ ಪ್ರಕರಣ ಸಂಬಂಧಿಸಿದಂತೆ ಮಗಳಿಗೆ ಆಸ್ತಿ- ಜಾಗ ಪಾಲು ಮಾಡಿ ಕೊಡದೇ ಇರುವ ಕಾರಣದಿಂದ ಕುಟುಂಬ ಸದಸ್ಯರಾದ ಅಳಿಯ ಮತ್ತು ಮೊಮ್ಮಗ ಸೇರಿ ಬಾಲಕೃಷ್ಣ ಭಟ್ ಅವರನ್ನು ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.
ಹಂತಕರಿಬ್ಬರನ್ನು ಧರ್ಮಸ್ಥಳ ಪೊಲೀಸರು ಕಾರ್ಯಾಚರಣೆ ನಡೆಸಿ ಹೆಡೆಮುರಿ ಕಟ್ಟಿದ್ದಾರೆ. ಧರ್ಮಸ್ಥಳ ಪೊಲೀಸರು ಮೊಬೈಲ್, ಸಿಸಿ ಕ್ಯಾಮರ ಹಾಗೂ ವಿವಿಧ ಟೆಕ್ನಿಕಲ್ ಅಧಾರದಲ್ಲಿ ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕಿ ಕೊಲೆಯಾದ ಬಾಲಕೃಷ್ಣ ಭಟ್ ಅವರ ಮಗಳ ಗಂಡ ರಾಘವೇಂದ್ರ ಕೆಧಿಲಾಯ ಮತ್ತು ಮಗಳ ಮಗ ಮುರುಳಿಕೃಷ್ಣ ಎಂಬಾತನನ್ನು ಆ.24 ರಂದು ಕಾಸರಗೋಡು ಮನೆಯಲ್ಲಿ ಅರೆಸ್ಟ್ ಮಾಡಿದ್ದಾರೆ.
ಮೊದಲಿಗೆ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ಬಂದು ವಿಚಾರಣೆ ನಡೆಸಿದಾಗ ಬಾಲಕೃಷ್ಣ ಭಟ್ ಅವರನ್ನು ಆಸ್ತಿ ಹಾಗೂ ಚಿನ್ನಾಭರಣಕ್ಕಾಗಿ ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಆಳಿಯನ ಜೊತೆ ಬಂದಿದ್ದ ಮೊಮ್ಮಗ ಮೊದಲು ಮಾರಕಾಸ್ತ್ರದಿಂದ ಕೊಲೆ ಮಾಡಿರುವುದಾಗಿ ಬಾಯಿಬಿಟ್ಟಿದ್ದು ಆರೋಪಿಗಳಿಬ್ಬರನ್ನು ಕೋರ್ಟ್ ರಜೆ ಇರುವ ಕಾರಣದಿಂದ ಬೆಳ್ತಂಗಡಿ ನ್ಯಾಯಾಧೀಶರ ಮನೆಗೆ ಆ.24 ರಂದು ಸಂಜೆ ಹಾಜರುಪಡಿಸಿದ್ದು ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.
ಹೆಚ್ಚಿನ ವಿಚಾರಣೆಗಾಗಿ ಆ.27 ರಂದು ಧರ್ಮಸ್ಥಳ ಪೊಲೀಸರು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ಪಡೆಯಲಿದ್ದಾರೆ.