ಕೊರಮ-ಕೊರಚ ಅಭಿವೃದ್ಧಿ ನಿಗಮ ಸ್ಥಾಪನೆಗೆ ಆಗ್ರಹ

Vijayasakshi (Gadag News) :

-ಡಿಸಿಎಂ ಗೋವಿಂದ ಕಾರಜೋಳ ಹಿಂಬರಹಕ್ಕೆ ಕಿಡಿ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ

ರಾಜ್ಯಾದ್ಯಂತ ಸುಮಾರು 25 ಲಕ್ಷ ಜನಸಂಖ್ಯೆ ಹೊಂದಿರುವ ಪ.ಜಾ. ಅಲೆಮಾರಿ ಕೊರಮ-ಕೊರಚ, ಕುರುವನ್, ಕೇಪ್‌ಮಾರಿಸ್, ಎರಕುಲ ಕೈಕಾಡಿ(ಕುಳುವ) ಮತ್ತು ಎಸ್.ಸಿ, ಎಸ್.ಟಿ ಅಲೆಮಾರಿ ಸಮುದಾಯಗಳ ಪ್ರಗತಿಗೆ ಕೊರಮ-ಕೊರಚ ಅಭಿವೃದ್ಧಿ ನಿಗಮ ಸ್ಥಾಪಿಸಬೇಕೆಂದು ಅಖಿಲ ಕರ್ನಾಟಕ ಕುಳುವ ಮಹಾಸಂಘದ ರಾಜ್ಯಾಧ್ಯಕ್ಷ ಆನಂದಪ್ಪ ದಾವಣಗೆರೆ ಆಗ್ರಹಿಸಿದರು.

ಕೊಪ್ಪಳದ ಮೀಡಿಯಾ ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಸಮುದಾಯ ಎಲ್ಲ ಕ್ಷೇತ್ರಗಳ ಅಭಿವೃದ್ಧಿಯಿಂದ ವಂಚಿತವಾಗಿದ್ದು, ಇಂದಿಗೂ ಜೀವನೋಪಾಯಕ್ಕಾಗಿ ಹಂದಿಸಾಕಾಣಿಕೆ, ಬುಟ್ಟಿ ನೇಯುವ, ಶಹನಾಯಿ ನುಡಿಸುವ, ಹಗ್ಗ ನೇಯುವ, ಈಚಲು ಗರಿಗಳ ಕಸಪೊರಕೆ ಕಟ್ಟುವ, ಹಚ್ಚೆ ಹಾಕುವ ಕಾಯಕಾನುಸಾರ ಜೀವನ ನಡೆಸುತ್ತಿದೆ. ಎಸ್‌ಸಿ, ಎಸ್‌ಟಿಯಲ್ಲಿಯೇ ಇರುವ ಮಾದಿಗ, ಒಡ್ಡರ್ ಮತ್ತಿತರ ಸಮಾಜಗಳಿಗೆ ಸಿಕ್ಕಿರುವ ರಾಜಕೀಯ ಪ್ರಾತಿನಿಧ್ಯ ಇದುವರೆಗೂ ನಮಗೆ ಸಿಕ್ಕಿಲ್ಲ. ಆದ್ದರಿಂದ ಕೊರಮ-ಕೊರಚ ಸಮುದಾಯದ ಯಾರೊಬ್ಬರೂ ಶಾಸಕರಾಗುವುದಿರಲಿ, ಜಿಪಂ ಸದಸ್ಯರೂ ಆಗಿಲ್ಲ ಎಂದರು.

ನಮ್ಮ ಸಮಾಜಗಳ ಅಭಿವೃದ್ಧಿ ಹಿತದೃಷ್ಟಿಯಿಂದ 2013ರಲ್ಲಿ ಅಂದಿನ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕೊರಮ-ಕೊರಚ ಅಭಿವೃದ್ಧಿ ನಿಗಮ ಸ್ಥಾಪಿಸಲು 5 ಕೋಟಿ ರೂ.ಘೋಷಿಸಿದ್ದರು. ಆದರೆ ಇಂದಿನ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು 2019ರ ಡಿಸೆಂಬರ್ 26ರಂದು ಕೊರಮ-ಕೊರಚ ಅಭಿವೃದ್ಧಿ ನಿಗಮ ಸ್ಥಾಪನೆಯ ಅಗತ್ಯವಿಲ್ಲವೆಂದು ಹಿಂಬರಹ ನೀಡಿ, ಸಮುದಾಯದ ಏಳ್ಗೆಗೆ ಅಡ್ಡಗಾಲು ಹಾಕಿದರೆಂದು ಖಂಡಿಸಿದರು.

ಕೂಡಲೇ ಸರಕಾರ ಕೊರಮ-ಕೊರಚ ಜನಾಂಗಕ್ಕೆ ಸಾಮಾಜಿಕ ನ್ಯಾಯದಡಿ 50 ಕೋಟಿ ನಿಗದಿಗೊಳಿಸಿ ಘೋಷಣೆಯಾಗಿರುವ ಕೊರಮ-ಕೊರಚ ಅಭಿವೃದ್ಧಿ ನಿಗಮವನ್ನು ಅನುಷ್ಠಾನಕ್ಕೆ ತರಬೇಕು. ನಿರ್ಲಕ್ಷ್ಯ ವಹಿಸಿದರೆ ರಾಜ್ಯಾದ್ಯಂತ ಉಗ್ರಹೋರಾಟ ನಡೆಸಲಾಗುತ್ತದೆ ಎಂದು ಅವರು ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ರವಿಕುಮಾರ್ ವಣಗೇರಿ, ರಾಜ್ಯ ಜಂಟಿ ಕಾರ್ಯದರ್ಶಿ ಕಿರಣ್‌ಕುಮಾರ್ ಕೊತ್ತಗೆರೆ, ಜಿಲ್ಲಾಧ್ಯಕ್ಷ ಕಂಬಣ್ಣ ಭಜಂತ್ರಿ, ಪ್ರಧಾನ ಕಾರ್ಯದರ್ಶಿ ಲೋಕೇಶ್ ಭಜಂತ್ರಿ ಬೆಣಕಲ್ ಮತ್ತಿತರರು ಇದ್ದರು.

ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTube ಅನುಸರಿಸಿ.

Leave A Reply

Your email address will not be published.