ವಚನ ಸಾಹಿತ್ಯ ಮನುಕುಲದ ದೀವಿಗೆ : ಶಾಂತಲಿಂಗ ಶ್ರೀಗಳು

0
Devotional thinking program
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಬಸವಾದಿ ಶರಣರ ವಚನ ಸಾಹಿತ್ಯದಿಂದ ಮನುಕುಲಕ್ಕೆ ಒಳಿತಾಗಿದೆ. ಧರ್ಮ, ಸಂಸ್ಕಾರ ಮತ್ತು ಸಂಸ್ಕೃತಿಯೊಂದಿಗೆ, ಮಾನವೀಯತೆಯನ್ನು ಪ್ರತಿಪಾದಿಸುವ ಧರ್ಮ ಬಸವಧರ್ಮವಾಗಿದೆ ಎಂದು ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠ ಹಾಗೂ ಶಿರೋಳದ ತೋಂಟದಾರ್ಯ ಮಠದ ಪೂಜ್ಯ ಶಾಂತಲಿಂಗ ಮಹಾಸ್ವಾಮಿಗಳು ಹೇಳಿದರು.
ಅವರು ಗದಗ ಒಕ್ಕಲಗೇರಿಯ ಶಿವಕುಮಾರ ಎಚ್.ಪಾಟೀಲ ಅವರ ಕಟ್ಟಡದಲ್ಲಿ ಬಸವದಳ, ಬಸವಕೇಂದ್ರ, ಲಿಂಗಾಯತ ಪ್ರಗತಿಶೀಲ ಸಂಘದ ಆಶ್ರಯದಲ್ಲಿ ಶ್ರಾವಣ ಮಾಸದ ಅಂಗವಾಗಿ ಹಮ್ಮಿಕೊಂಡಿದ್ದ ವಚನ ಚಿಂತನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಶರಣ ಸಂಸ್ಕೃತಿಯ ಪ್ರತಿಪಾದಕ, ಬಸವಾಭಿಮಾನಿ ಶಿವಕುಮಾರ ಪಾಟೀಲ ಅವರ ಕುಟುಂಬ ಧರ್ಮನಿಷ್ಠೆ, ಸಂಸ್ಕೃತಿಗೆ ಹೆಸರಾದ ಕುಟುಂಬವಾಗಿದೆ. ಧರ್ಮ ಮತ್ತು ಧರ್ಮ ಗುರುಗಳ ಬಗ್ಗೆ ಶೃದ್ಧಾಭಕ್ತಿಯನ್ನು ಹೊಂದಿದವರು. ಪ್ರತಿ ವರ್ಷ ಶ್ರಾವಣ ಮಾಸದ ಒಂದು ದಿನ ಗದುಗಿನ ವೀರೇಶ್ವರ ಪುಣ್ಯಾಶ್ರಮದ ಪೂಜ್ಯ ಡಾ. ಪಂ.ಪುಟ್ಟರಾಜ ಕವಿ ಗವಾಯಿಗಳವರು ಪಾಟೀಲರ ಮನೆಯಲ್ಲಿದ್ದು ಪೂಜೆ, ಪ್ರಸಾದ, ಸಂಗೀತ, ಧರ್ಮ ಬೋಧನೆ, ಆಶೀರ್ವಚನ ಮಾಡಿ ಜನಸಮುದಾಯವನ್ನು ಸನ್ಮಾರ್ಗದೆಡೆ ಸಾಗುವಂತೆ ಬೋಧಿಸುತ್ತಿದ್ದರು. ಇದೀಗ ಪರಂಪರೆಯನ್ನು ವಚನ ಚಿಂತನ ಕಾರ್ಯಕ್ರಮ ಜರುಗಿಸುವ ಮೂಲಕ ಈ ಭಾಗದ ಜನತೆಗೆ ಒಳ್ಳೆ ಸಂದೇಶ ರವಾನಿಸಲು ಅವಕಾಶ ಕಲ್ಪಿಸಿರುವದು ಅಭಿನಂದನೀಯ ಎಂದರು.
ಮಂಗಳಾ ಕಾಮಣ್ಣವರ ಶರಣ ಅಲ್ಲಮಪ್ರಭು ದೇವರ ವಚನ ಚಿಂತನೆಯನ್ನು ಮಾಡಿದರು. ಈ ವಚನವನ್ನು ಎಸ್.ಪಿ. ಹೊಂಬಳ ಅವರು ಸಂಗೀತಕ್ಕೆ ಅಳವಡಿಸಿ ರಾಗಬದ್ಧವಾಗಿ ಹಾಡಿದರು. ಅಧ್ಯಕ್ಷತೆಯನ್ನು ವಹಿಸಿದ್ದ ಬಸವ ದಳದ ಅಧ್ಯಕ್ಷ ವ್ಹಿ.ಕೆ. ಕರಿಗೌಡ್ರ ಸಂದರ್ಭೋಚಿತವಾಗಿ ಮಾತನಾಡಿದರು.
ಭಾರತಿ ಶಿವಕುಮಾರ ಪಾಟೀಲ ದಂಪತಿಗಳನ್ನು ಹಾಗೂ ವಚನ ಚಿಂತನೆಗೈದಯ ಮಂಗಳಾ ಕಾಮಣ್ಣವರ ಅವರನ್ನು ಪೂಜ್ಯರು ಸನ್ಮಾನಿಸಿ ಗೌರವಿಸಿದರು. ಪ್ರಾರಂಭದಲ್ಲಿ ಸಾಮೂಹಿಕ ಪ್ರಾರ್ಥನೆ ಜರುಗಿತು. ಶಿವಕುಮಾರ ಪಾಟೀಲ ಸ್ವಾಗತಿಸಿದರು, ಕಿರಣ ತಿಪ್ಪಣ್ಣವರ ನಿರೂಪಿಸಿದರು. ವಚನ ಮಂಗಲಗೀತೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡವು.
ಕಾರ್ಯಕ್ರಮದಲ್ಲಿ ಬಸವದಳ, ಬಸವಕೇಂದ್ರ, ಲಿಂಗಾಯತ ಪ್ರಗತಿಶೀಲ ಸಂಘದ ಪದಾಧಿಕಾರಿಗಳು, ಬಸವಾಭಿಮಾನಿಗಳು, ಒಕ್ಕಲಗೇರಿಯ ಗುರುಹಿರಿಯರು ಪಾಲ್ಗೊಂಡಿದ್ದರು.
ಶರಣ ಮತ್ತು ಶರಣೆಯರ ವಚನಗಳು ಆದರ್ಶಮಯ ಬದುಕಿಗೆ ಬೆಳಕಾಗಿವೆ. ಎಲ್ಲರನ್ನೂ ಸನ್ಮಾರ್ಗದೆಡೆ ಮುನ್ನಡೆಸುವ ವಚನ ಸಾಹಿತ್ಯವನ್ನು ನಾವಿಂದು ಓದಬೇಕು, ಅರಿತುಕೊಳ್ಳಬೇಕು. ಅದರಂತೆ ನಡೆದುಕೊಳ್ಳಬೇಕು. ಅಂದಾಗ ಜೀವನ ಪಾವನಗೊಳ್ಳುವದು ಎಂದು ಪೂಜ್ಯ ಶಾಂತಲಿಂಗ ಮಹಾಸ್ವಾಮಿಗಳು ಹೇಳಿದರು.

Spread the love
Advertisement

LEAVE A REPLY

Please enter your comment!
Please enter your name here