ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇ ಶ್ವರ : ಹಬ್ಬ-ಹರಿದಿನಗಳನ್ನು ಸಂಪ್ರದಾಯದಂತೆ ಆಚರಿಸುವದು ಮುಖ್ಯವಾಗಿದೆ. ಬರಲಿರುವ ಗಣೇಶೋತ್ಸವ ಮತ್ತು ಈದ್ಮಿಲಾದ್ ಹಬ್ಬಗಳನ್ನು ಶಾಂತಿ-ಸೌಹಾರ್ದತೆಯಿಂದ ನಡೆಸಿ. ಶಾಂತಿಗೆ ಭಂಗ ತರುವ ಮೂಲಕ ಪೊಲೀಸರಿಗೆ ಕೆಲಸ ನೀಡಬೇಡಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಸೂಚ್ಯವಾಗಿ ಹೇಳಿದರು.
ಅವರು ಪಟ್ಟಣದ ತಾ.ಪಂ ಸಭಾಂಗಣದಲ್ಲಿ ಶನಿವಾರ ಗಣೇಶೋತ್ಸವ ಹಾಗೂ ಈದ್ಮಿಲಾದ್ ಹಬ್ಬದ ಪ್ರಯುಕ್ತ ಕರೆಯಲಾಗಿದ್ದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಪ್ರತಿವರ್ಷ ಪೂರ್ವಭಾವಿ ಸಭೆ ಸೇರಿಸುವ ಸಂಪ್ರದಾಯ ಕಡಿಮೆಯಾಗಲಿ. ಅದರ ಬದಲಾಗಿ ಸೌಹಾರ್ದತಾ ಸಭೆಗಳು ನಡೆಯುವಂತಾಗಬೇಕು. ಅಂದಾಗಲೇ ಶಾಂತಿ ಎನ್ನುವ ಶಬ್ಧಕ್ಕೆ ಅರ್ಥ ಬರಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲ ಗಣೇಶ ಮಂಡಳಿಗಳವರು ಹಾಗೂ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ. ಗಣೇಶೋತ್ಸವಕ್ಕೆ ಹಾಗೂ ಈದ್ ಮಿಲಾದ್ ಹಬ್ಬಕ್ಕೆ ಆಯಾ ಪ್ರದೇಶದ ಜನಪ್ರತಿನಿಧಿಗಳು, ಹಿರಿಯರೂ ಜವಾಬ್ದಾರಿ ವಹಿಸಬೇಕು. ಎಲ್ಲರೂ ಈ ಬಾರಿ ಗಣೇಶ ವಿಸರ್ಜನೆಯ ಸಂದರ್ಭದಲ್ಲಿ ಸಹಕಾರದಿಂದ ನಡೆದುಕೊಳ್ಳಬೇಕು. ಯಾರೇ ನಿಯಮ ಮೀರಿ ನಡೆದುಕೊಂಡಲ್ಲಿ ಕಾನೂನು ಕ್ರಮ ತೆಗೆದುಕೊಳ್ಳಲಾಗುವದು. ನಿಮ್ಮ ಆಚರಣೆಯಿಂದ ಜನರಿಗೆ ತೊಂದರೆಯಾಗದಂತೆ ಎಚ್ಚರ ವಹಿಸಿ, ಮುಂದಿನ ದಿನಗಳಲ್ಲಿ ಪಟ್ಟಣದ ಹಬ್ಬ ಆಚರಣೆಗಳ ಬಗ್ಗೆ ಮತ್ತೊಂದು ಕಡೆ ಹೊಗಳಿಕೆಯ ಮಾತುಗಳು ಬರುವಂತಾಗಲಿ ಎಂದು ಹೇಳಿದರು.
ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಬಿ. ಸಂಕದ, ಡಿವೈಎಸ್ಪಿ ಡಿ.ಎಚ್. ಇನಾಮದಾರ, ತಾ.ಪಂ ಇಓ ಕೃಷ್ಣಪ್ಪ ಧರ್ಮರ, ಸಿಪಿಐ ನಾಗರಾಜ ಮಾಡಳ್ಳಿ, ಪುರಸಭೆ ಮುಖ್ಯಾಧಿಕಾರಿ ಮಹೇಶ ಹಡಪದ ಮಾತನಾಡಿದರು.
ಕ್ರೈಂ ವಿಭಾಗದ ಪಿಎಸ್ಐ ಎನ್.ಎಸ್. ಜೋಗದಂಡಕರ, ಗುರುರಾಜ ಇದ್ದರು. ಸಾರ್ವಜನಿಕರ ಪರವಾಗಿ ಪೂರ್ಣಾಜಿ ಖರಾಟೆ, ಸೋಮೇಶ ಉಪನಾಳ, ಪುರಸಭೆ ಉಪಾಧ್ಯಕ್ಷ ಪಿರ್ದೋಶ ಆಡೂರ, ಎಂ.ಎಂ. ಗದಗ, ಮುಸ್ತಾಕ್ಅಹ್ಮದ್ ಶಿರಹಟ್ಟಿ, ಚಂಬಣ್ಣ ಬಾಳಿಕಾಯಿ, ಗಂಗಾಧರ ಮೆಣಸಿನಕಾಯಿ, ಎಸ್.ಕೆ. ಹವಾಲ್ದಾರ, ಡಿ.ಜೆ. ಮುಚ್ಚಾಲೆ, ಶರಣು ಗೋಡಿ ಸೇರಿದಂತೆ ಅನೇಕರು ಮಾತನಾಡಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಸಭೆಯಲ್ಲಿ ಶಿವಯೋಗಿ ಅಂಕಲಕೋಟಿ, ಎಸ್.ಕೆ. ಕಣಕೆ, ಮಂಜುನಾಥ ಹೊಗೆಸೊಪ್ಪಿನ, ಮಹೇಶ ಕಲಘಟಗಿ, ಬಸವರಾಜ ಕಲ್ಲೂರ, ಬಸವರಾಜ ಹಿರೇಮನಿ, ರಾಜಣ್ಣ ಮಡಿವಾಳರ, ಝಾಕೀರ ಹವಾಲ್ದಾರ, ಅನಿಲ ಮುಳಗುಂದ, ಸದಾನಂದ ನಂದೆಣ್ಣವರ, ದಾದಾಪೀರ ತಂಬಾಕದ ಸೇರಿದಂತೆ ನೂರಾರು ಜನರು ಹಾಜರಿದ್ದರು. ಹವಾಲ್ದಾರ್ ಪ್ರಕಾಶ ಮ್ಯಾಗೇರಿ ಸ್ವಾಗತಿಸಿದರು. ಈಶ್ವರ ಮೇಡ್ಲೇರಿ ನಿರೂಪಿಸಿದರು. ಪಿಎಸ್ಐ ಈರಪ್ಪ ರಿತ್ತಿ ವಂದಿಸಿದರು.
ತಹಸೀಲ್ದಾರ ವಾಸುದೇವ ಸ್ವಾಮಿ ಮಾತನಾಡಿ, ಹಬ್ಬಗಳು ನಮ್ಮ ಸಂಸ್ಕೃತಿಯ ಪ್ರತೀಕವಾಗಿದ್ದು, ಸಂಸ್ಕೃತಿ ಮತ್ತು ಸಂಪ್ರದಾಯಗಳಿಗೆ ಧಕ್ಕೆ ಬರದಂತೆ ಹಬ್ಬಗಳನ್ನು ಆಚರಿಸುವದು ಮುಖ್ಯವಾಗಿದೆ. ಈ ಕುರಿತಂತೆ ರೂಪಿಸಲಾಗಿರುವ ನಿಯಮಗಳನ್ನು ಪಾಲಿಸುವದು ಅಗತ್ಯವಾಗಿದ್ದು, ಎಲ್ಲರೂ ಸಹಕಾರದಿಂದ, ಬಾಂಧ್ಯವ್ಯದಿಂದ ಹಬ್ಬ ಆಚರಣೆ ಮಾಡೋಣ ಎಂದು ಹೇಳಿದರು.