ವಿಜಯಸಾಕ್ಷಿ ಸುದ್ದಿ, ಗದಗ : ಸರ್ಕಾರಿ ಶಾಲೆಗಳು ಮಕ್ಕಳ ಉಚಿತ ಶಿಕ್ಷಣದ ಗುರಿ ಹೊಂದಿದ್ದು, ಇದು ಪೋಷಕರ ಮೇಲಿನ ಆರ್ಥಿಕ ಹ್ರೆರೆಯನ್ನು ಕಡಿಮೆಗೊಳಿಸಿ ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆಯಲು ಸಹಕಾರಿಯಾಗಿದೆ ಎಂದು ನಿವೃತ್ತ ಪ್ರಾಚಾರ್ಯೆ ಪ್ರೇಮಾ ಹಂದಿಗೋಳ ಅಭಿಪ್ರಾಯಪಟ್ಟರು.
ಅವರು ಮಂಗಳವಾರ ಗದಗ ಜಿಲ್ಲಾ ಅಖಿಲ ಭಾರತ ಶರಣ ಸಂಕುಲನದ ಶರಣೆ ಅಕ್ಕಮಹಾದೇವಿಯ ಕದಳಿಶ್ರೀ ವೇದಿಕೆ ವತಿಯಿಂದ ಬೆಟಗೇರಿಯ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣುಮಕ್ಕಳ ಶಾಲೆ ನಂ. 3ರಲ್ಲಿ ಜರುಗಿದ ಶ್ರಾವಣದ ಅಮೃತ ಭೋಜನ-ಜ್ಞಾನ ಸಿಂಚನ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡು ವಚನ ಕಂಠಪಾಠ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಸರಕಾರಿ ಶಾಲೆಯ ಶಿಕ್ಷಕ ಸಮುದಾಯದವರು ಸೂಕ್ತ ತರಬೇತಿ ಪಡೆದು ಮಕ್ಕಳ ಮನೆಯ ಹಾಗೂ ಮನಸ್ಸಿನ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅರಿತು, ಆತ್ಮೀಯ ಒಡನಾಟದೊಂದಿಗೆ ಬೋಧನೆಯಲ್ಲಿ ತೊಡಗುತ್ತಿರುವದು ಶ್ಲಾಘನೀಯ ಎಂದರು.
ಶಾಲೆಯ ಶಿಕ್ಷಕ ಎಚ್.ಎಸ್. ಮಂಗಳೂರ ಮಾತನಾಡಿ, ಬಾಲ್ಯದಲ್ಲಿಯೇ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಅಕ್ಷರ ಜ್ಞಾನದ ಜೊತೆಗೆ ನೈತಿಕ ಮೌಲ್ಯಗಳು ಮಕ್ಕಳನ್ನು ಸಮೃದ್ಧಗೊಳಿಸುತ್ತವೆ ಎಂದರು.
ವೇದಿಕೆಯ ಮೇಲೆ ಸುಶೀಲಾ ಕೋಟಿ, ಶಾಂತಾ ಗೌಡರ, ರಂಜನಾ ಕೋಟಿ, ಜಯಲಕ್ಷ್ಮಿ ಗುಗ್ಗರಿ ಉಪಸ್ಥಿತರಿದ್ದರು. ಕದಳಿಶ್ರೀ ವೇದಿಕೆಯಿಂದ ವಿದ್ಯಾರ್ಥಿಗಳಿಗೆ ಬರವಣಿಗೆಯ ಸಾಮಗ್ರಿಗಳನ್ನು ವಿತರಿಸಿ, ಸಿಹಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಇದೇ ಸಂದರ್ಭದಲ್ಲಿ ಅತಿಥಿಗಳು ಸೇರಿದಂತೆ ಅಡುಗೆ ಸಿಬ್ಬಂದಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು.
ವಚನ ಗಾಯನದಲ್ಲಿ ವಿದ್ಯಾರ್ಥಿನಿಯರಾದ ಧನಲಕ್ಷ್ಮಿ ಕಾಳಗಿ, ದಿವ್ಯಾ ಬಡಿಗೇರ, ಪವಿತ್ರಾ ಸೊರಟೂರ, ಭೂಮಿಕಾ ವಗ್ಗಾ, ದೀಕ್ಷಾ ಕೊಟೇಕಲ್ಲ, ಸ್ವಾತಿ ಮುಂಡರಗಿ, ನಿವೇದಿತಾ ಗೋಟೂರ, ಶ್ರಾವಣಿ ರಜಪೂತ ಮುಂತಾದವರು ಪಾಲ್ಗೊಂಡಿದ್ದರು.
ಗಾಯಕ ಶಿವಶಂಕರ ದೊಡ್ಡಮನಿ ಸುಶ್ರಾವ್ಯವಾಗಿ ವಚನ ಗಾಯನ ನಡೆಸಿಕೊಟ್ಟರು. ಸಂಪನ್ಮೂಲ ವ್ಯಕ್ತಿ ಕೆ.ಎಸ್. ಬೇಲೇರಿ ಸ್ವಾಗತಿಸಿದರು. ವಿ.ಎನ್. ನೀಲಗುಂದ ನಿರೂಪಿಸಿದರು. ಡಿ.ವೈ. ಕಂಬಳಿ ವಂದಿಸಿದರು. ಲಕ್ಷ್ಮಿ ಹೊಸಮನಿ, ಗೀತಾ ನವಲೆ, ಲೀಲಾವತಿ ಗಾಳಿ ಮುಂತಾದವರು ಪಾಲ್ಗೊಂಡಿದ್ದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲಾ ಮುಖ್ಯೋಪಾಧ್ಯಾಯೆ ಪಿ.ಆರ್. ನಿಡಗುಂದಿ, ಮಕ್ಕಳು ಸರಕಾರಿ ಶಾಲೆಗಳಲ್ಲಿ ಶಿಕ್ಷಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿ ಕಲಿಕೆಯಲ್ಲಿ ಆಸಕ್ತಿಯಿಂದ ಪಾಲ್ಗೊಳ್ಳುತ್ತಿದ್ದಾರೆ. ಕದಳಿಶ್ರೀ ವೇದಿಕೆ ಸೇರಿದಂತೆ ಹಲವಾರು ಸಮಾಜಸೇವಾ ಸಂಘಟನೆಗಳು ಸರಕಾರಿ ಶಾಲೆಗಳ ಬೆಂಬಲಕ್ಕೆ ನಿಂತಿರುವದು ಸಂತಸದ ಸಂಗತಿ ಎಂದರು.
Advertisement


