ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ : ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಾಹನಗಳಲ್ಲಿ ಸಾರ್ವಜನಿಕ ಪ್ರಯಾಣಿಕರಿಗೆ ಚಿಲ್ಲರೆ ಸಮಸ್ಯೆಯನ್ನು ಬಗೆಹರಿಸಿ, ಸಾರಿಗೆ ವ್ಯವಸ್ಥೆಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ಕಾರ್ಯಾಚರಣೆಯನ್ನು ಉತ್ತಮಪಡಿಸಲು ನಗದುರಹಿತ UPI ವಹಿವಾಟುಗಳ ಮೂಲಕ ಟಿಕೆಟ್ ವಿತರಣೆಯನ್ನು 01-09-2023ರಿಂದ ಪ್ರಾರಂಭಿಸಿದ್ದು, ಪ್ರಸ್ತುತ ಸಂಸ್ಥೆಯ 51 ಘಟಕಗಳಲ್ಲಿ ನಿರ್ವಹಿಸಲಾಗುತ್ತಿದೆ.
ಇಲ್ಲಿಯವರೆಗೆ UPI ವಹಿವಾಟಿನಿಂದ ಒಟ್ಟು 42.90 ಲಕ್ಷ ವಹಿವಾಟುಗಳಿಂದ ರೂ. 38.69 ಕೋಟಿ ಸಂಗ್ರಹವಾಗಿರುತ್ತದೆ. ಪ್ರಸ್ತುತ ಪ್ರತಿ ದಿನ ಸರಾಸರಿ 27005 ವಹಿವಾಟುಗಳಿಂದ ರೂ.22.52 ಲಕ್ಷಗಳಷ್ಟು ಸಂಗ್ರಹವಾಗುತ್ತಿದೆ. ಸದರಿ UPI ವಹಿವಾಟು ವ್ಯವಸ್ಥೆಯನ್ನು ಸಂಸ್ಥೆಯ ವಾಣಿಜ್ಯ ಆದಾಯ, ಪ್ರಾಸಂಗಿಕ ಕರಾರು ಮೊತ್ತ ಪಾವತಿ, ಮಾಸಿಕ ಪಾಸು ಆದಾಯ ಹಾಗೂ ಮುಂಗಡ ಆಸನ ಕಾಯ್ದಿರಿಸುವ ಕೌಂಟರ್‌ಗಳಲ್ಲಿ ಅಳವಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿದೆ.