ಛಲದಿಂದ ಬಾಳ್ವೆ ನಡೆಸಿ : ಪೂಜ್ಯ ಕಲ್ಲಯ್ಯಜ್ಜನವರು

0
11 couples free mass marriage at Kashi Vishwanath Jatre
Spread the love

ವಿಜಯಸಾಕ್ಷಿ ಸುದ್ದಿ, ಗದಗ : ನವವಿವಾಹಿತ ದಂಪತಿಗಳು ಆದರ್ಶ ಜೀವನ ಸಾಗಿಸಲಿ, ಮಕ್ಕಳಿಗೆ ಒಳ್ಳೆಯ ಸಂಸ್ಕಾರ- ಸಂಸ್ಕೃತಿಯನ್ನು ನೀಡಿ ಧರ್ಮದ ಹಾದಿಯಲ್ಲಿ ಮುನ್ನಡೆಸಿ ಎಂದು ಗದಗ ವೀರೇಶ್ವರ ಪುಣ್ಯಾಶ್ರಮದ ಪೂಜ್ಯ ಕಲ್ಲಯ್ಯಜ್ಜನವರು ಹೇಳಿದರು.
ಅವರು ಗದುಗಿನ ಕಾಶೀ ವಿಶ್ವನಾಥ ನಗರದ ಶ್ರೀ ಕಾಶೀ ವಿಶ್ವನಾಥ ರಥೋತ್ಸವ ಹಾಗೂ ಜಗನ್ಮಾತೆ ಶ್ರೀ ದುರ್ಗಾದೇವಿಗೆ ಉಡಿ ತುಂಬುವ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ ಸರ್ವಧರ್ಮಗಳ 11 ಜೋಡಿಗಳ ಉಚಿತ ಸಾಮೂಹಿಕ ವಿವಾಹ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಜೀವನದಲ್ಲಿ ಸುಖ-ದುಃಖ, ಏರು-ಇಳಿತ ಬರುವದು ಸಹಜ. ಸಮಸ್ಯೆಗಳನ್ನು ಮೆಟ್ಟಿ ನಿಂತು ಛಲದಿಂದ ಬಾಳಿ ಸಾಧಿಸಿ ತೋರಿಸಬೇಕು. ಇದನ್ನು ನವವಿವಾಹಿತರು ಅರಿತುಕೊಳ್ಳಬೇಕು ಎಂದರಲ್ಲದೆ, ಬಾಸಿಂಗ ಬಲ, ಕಷ್ಟ ಬಂದರೂ ತಾಳ್ಮೆ ಬೇಕು ಎಂದು ಸೂಚಿಸುವ ತಾಳಿ, ಕುಂಕುಮ, ಕಾಲುಂಗರದ ಔಚಿತ್ಯದ ಹಿನ್ನೆಲೆ ವಿಶ್ಲೇಷಿಸಿದರು.
ಕಾಶೀ ವಿಶ್ವನಾಥ ನಗರದಲ್ಲಿ ಸರ್ವ ಜನಾಂಗದವರಿದ್ದಾರೆ. ಒಗ್ಗಟ್ಟಿನೊಂದಿಗೆ ಸಮಾಜಮುಖಿಯಾಗಿ ಕಾರ್ಯ ಮಾಡುತ್ತಾರೆ. ಪ್ರತಿ ವರ್ಷ ಜಾತ್ರಾ ಮಹೋತ್ಸವದಲ್ಲಿ ಸಾಮೂಹಿಕ ವಿವಾಹ ಏರ್ಪಡಿಸಿ ಬಡಬಗ್ಗರಿಗೆ ಆಗುವ ಆರ್ಥಿಕ ಹೊರೆಯನ್ನು ನೀಗಿಸಿದ್ದಾರೆ. ಸಂಗೀತ, ಸಾಹಿತ್ಯ, ಸಾಂಸ್ಕೃತಿಕ ಕಾರ್ಯಚಟುವಟಿಕೆಗಳಿಂದ ಯುವ ಜನಾಂಗವನ್ನು ಸನ್ಮಾರ್ಗದೆಡೆ ಮುನ್ನಡೆಸುತ್ತಿರುವ ಕಾಶೀ ವಿಶ್ವನಾಥ ನಗರದ ಹಿರಿಯರ ಮಾರ್ಗದರ್ಶನ ಸಾರ್ಥಕತೆ ಪಡೆದಿದೆ ಎಂದರು.
ಕಾಶೀ ವಿಶ್ವನಾಥ ನಗರದ ಅಧ್ಯಕ್ಷ ದುಂಡಪ್ಪ ಆಸಂಗಿ ಮಾತನಾಡಿ, ಹಿರಿಯರ ಮಾರ್ಗದರ್ಶನದಲ್ಲಿ ಉತ್ಸಾಹಿ ಯುವಕರು ಜಾತ್ರೆ, ಸಾಮೂಹಿಕ ವಿವಾಹ, ಇತರ ಅಭಿವೃದ್ಧಿ ಕಾರ್ಯಗಳನ್ನು ಚೆನ್ನಾಗಿ ಮಾಡಿಕೊಂಡು ಬಂದಿದ್ದಾರೆ. ಒಗ್ಗಟ್ಟು ಇದ್ದರೆ ಒಳ್ಳೆಯದನ್ನು ಮಾಡಲು ಸಾಧ್ಯ ಎಂದರು.
ಮುಖ್ಯ ಅತಿಥಿಗಳಾಗಿ ಪರಪ್ಪ ಉಮಚಗಿ, ದುಂಡಪ್ಪ ಆಸಂಗಿ, ಲಲಿತಾ ಅಸೂಟಿ, ಶಾಂತಪ್ಪ ಮುಳವಾಡ, ವಿರುಪಾಕ್ಷಪ್ಪ ರಾಮಗಿರಿ, ಚನ್ನವೀರಪ್ಪ ಮಳಗಿ, ಕಳಕನಗೌಡ ಕಡಬಲಕಟ್ಟಿ, ಗಂಗಾಧರ ಬಳಿಗೇರ, ದೇವಪ್ಪ ಮಳಗಿ, ಶೇಖಣ್ಣ ಮುಳವಾಡ, ರಮೇಶ ಅಣ್ಣಿಗೇರಿ, ಮಹಾಲಿಂಗಪ್ಪ ಬರಬರಿ, ಅಶೋಕ ಗಡಾದ ಮುಂತಾದವರಿದ್ದರು.
ನಗರಸಭೆಯ ಮಾಜಿ ಅಧ್ಯಕ್ಷ ಬಿ.ಬಿ. ಅಸೂಟಿ, ಜಾತ್ರಾ ಸಮಿತಿಯ ಕಾರ್ಯದರ್ಶಿ ಗಂಗಾಧರ ಬಳಿಗಾರ ಮಾತನಾಡಿದರು. ಅಧ್ಯಕ್ಷತೆಯನ್ನು ಜಾತ್ರಾ ಸಮಿತಿಯ ಅಧ್ಯಕ್ಷ ನಿಂಗಪ್ಪ ಹೈದ್ರಿ ವಹಿಸಿದ್ದರು. ಶಾಂತಪ್ಪ ಅಕ್ಕಿ ನಿರೂಪಿಸಿ ವಂದಿಸಿದರು.
ನಂತರ ಜರುಗಿದ ಮಹಾ ಅನ್ನಸಂತರ್ಪಣೆಗೆ ಪೂಜ್ಯ ಕಲ್ಲಯ್ಯಜ್ಜನವರು ಚಾಲನೆ ನೀಡಿದರು. ಸಂಜೆ ಕಾಶೀ ವಿಶ್ವನಾಥನ ಮಹಾರಥೋತ್ಸವವು ಸಕಲ ವಾದ್ಯ ವೈಭವಗಳೊಂದಿಗೆ ಜರುಗಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬಿಜೆಪಿ ನಾಯಕ ವಿಜಯಕುಮಾರ ಗಡ್ಡಿ ಮಾತನಾಡಿ,  ಕಾಶೀ ವಿಶ್ವನಾಥ ನಗರ ಆದರ್ಶತೆಗೆ ಹೆಸರಾಗಿದೆ. ಕಳೆದ ೩೦ ವರ್ಷಗಳಿಂದ ಉಚಿತ ಸಾಮೂಹಿಕ ವಿವಾಹ, ಮಹಾ ಅನ್ನಸಂತರ್ಪಣೆಯನ್ನು ಅಚ್ಚುಕಟ್ಟಾಗಿ ಮಾಡಿಕೊಂಡು ಬಂದಿದ್ದಾರೆ ಎಂದರು.

Spread the love
Advertisement

LEAVE A REPLY

Please enter your comment!
Please enter your name here