ಬೆಂಗಳೂರು: ಮುಡಾ ಹಗರಣ ಸಂಬಂಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ನೀಡಿರುವ ಅನುಮತಿ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಮತ್ತೆ ಮುಂದೂಡಿದೆ. ಇದರಿಂದ ಸಿಎಂ ನಿರಾಳರಾಗಿದ್ದಾರೆ. ಇಂದು ದೂರುದಾರ ಸ್ನೇಹಮಯಿ ಕೃಷ್ಣ ಪರ ಕೆ.ಜಿ.ರಾಘವನ್ ವಾದಮಂಡಿಸಿದ್ದು, ಸೆಪ್ಟೆಂಬರ್ 9ರಂದು ಮಧ್ಯಾಹ್ನ 2.30ಕ್ಕೆ ಮುಂದಿನ ವಿಚಾರಣೆಯನ್ನು ನಿಗದಿ ಮಾಡಲಾಗಿದ್ದು,
ಅಲ್ಲಿಯವರೆಗೂ ಸಿದ್ದರಾಮಯ್ಯಗೆ ಮತ್ತೆ ರಿಲೀಫ್ ಸಿಕ್ಕಂತಾಗಿದೆ. ನ್ಯಾಯಮೂರ್ತಿ ನಾಗಪ್ರಸನ್ನ ಅವರು ಹೇಳಿದಂತೆ ಸೆಪ್ಟೆಂಬರ್ 12ರಂದು ಅರ್ಜಿ ವಿಚಾರಣೆ ಪೂರ್ಣಗೊಳಲಿದೆ. ಈ ಮೂಲಕ ಈ ಕೇಸ್ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದೆ. ದೂರುದಾರ ಸ್ನೇಹಮಯಿ ಕೃಷ್ಣ ಪರವಾದ ಮಂಡಿಸಿದ ಹಿರಿಯ ವಕೀಲ ಕೆ.ಜಿ.ರಾಘವನ್, ಕಾನೂನು ಬಾಹಿರವಾಗಿ ಲಾಭ ಪಡೆಯದಿದ್ದರೂ ಪ್ರಭಾವ ಬಳಸಿ ಲಾಭ ಗಳಿಸುವುದು ಭ್ರಷ್ಟಾಚಾರಕ್ಕೆ ಸಮಾನವಾದದ್ದು.
ಸಾರ್ವಜನಿಕರಿಗೆ ಶುದ್ಧ ಆಡಳಿತದಲ್ಲಿ ನಂಬಿಕೆ ಇರುವಂತಿರಬೇಕು. ಈ ಹಗರಣ ಕೇವಲ ಇಬ್ಬರ ನಡುವಿನ ಪ್ರಕರಣವಲ್ಲ. ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ್ದಾಗಿದೆ. ಈ ಪ್ರಕರಣದಲ್ಲಿ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಸೆಕ್ಷನ್ 17ಎ ಅಡಿ ಪ್ರಾಸಿಕ್ಯೂಷನ್‌ಗೆ ಕೋರುವ ಅಗತ್ಯವಿಲ್ಲ. ಆದರೂ ಅನುಮತಿ ಕೋರಲಾಗಿದೆ. ಅರ್ಜಿದಾರರ ವಿರುದ್ಧ ಯಾವುದೇ ಆರೋಪ ಇಲ್ಲವಾದಲ್ಲಿ ಈ ಪ್ರಕ್ರಿಯೆ ಅಗತ್ಯವೇ ಇರುವುದಿಲ್ಲ ಎಂದರು.