ವಿಜಯಸಾಕ್ಷಿ ಸುದ್ದಿ, ಗದಗ : ಜಿಲ್ಲೆಯ ಶಿಕ್ಷಣದ ಗುಣಮಟ್ಟ ಉನ್ನತ ಮಟ್ಟಕ್ಕೇರಲು ಹಾಗೂ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಎಸ್‌ಎಸ್‌ಎಲ್‌ಸಿ ಉತ್ತಮ ಫಲಿತಾಂಶಕ್ಕಾಗಿ ಮುಂದಿನ ದಿನಗಳಲ್ಲಿ ಪ್ರತೀ ಪ್ರೌಢಶಾಲೆಗಳಲ್ಲಿ ಕೈಗೊಳ್ಳಬೇಕಾದ ವಿನೂತನ ಕ್ರಮಗಳ ಕುರಿತು ಆತ್ಮೀಯವಾಗಿ ಮುಖ್ಯ ಶಿಕ್ಷಕರೊಂದಿಗೆ ಸಂವಾದ ಮಾಡಿ, ಸರಿಯಾದ ಯೋಜನೆ ಹಾಗೂ ಪರಿಣಾಮಕಾರಿ ಅನುಷ್ಠಾನ, ಚಟುವಟಿಕೆ ಆಧಾರಿತ ಕಲಿಕೆ, ಶಿಸ್ತಿನಿಂದ ಶಾಲಾ ಹಂತದ ಘಟಕ ಪರೀಕ್ಷೆ ಹಾಗೂ ಜಿಲ್ಲಾ ಪರೀಕ್ಷೆ ಸಂಘಟನೆ ಈ ಎಲ್ಲ ಯೋಜನೆಗಳನ್ನು ಮುಖ್ಯೋಪಾಧ್ಯಾಯರು ತಮ್ಮ ಶಾಲೆಯ ಶಿಕ್ಷಕರೆಲ್ಲರೊಂದಿಗೆ ಪರಿಣಾಮಕಾರಿ ಅನುಷ್ಠಾನಕ್ಕೆ ಮುಂದಾಗಬೇಕು ಎಂದು ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಭರತ್ ಎಸ್ ಕಿವಿಮಾತು ಹೇಳಿದರು.
ಅವರು ಗದಗ ಜಿ.ಪಂ ಸಭಾಭವನದಲ್ಲಿ ಜರುಗಿದ ಗದಗ ಶಹರ ವಲಯ ಹಾಗೂ ಗದಗ ಗ್ರಾಮೀಣ ವಲಯದ ಎಲ್ಲಾ ಸರಕಾರಿ, ಅನುದಾನಿತ, ಅನುದಾನರಹಿತ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರಿಗೆ ಜಿಲ್ಲೆಯ `ಶೈಕ್ಷಣಿಕ ಅಭಿವೃದ್ಧಿ ಯೋಜನೆ’ ಹಾಗೂ `ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗಾಗಿ ಹಾಕಿಕೊಂಡ ಚಟುವಟಿಕೆ’ಗಳ ಬಗ್ಗೆ ಹಾಗೂ ತಮ್ಮ ಶಾಲೆಯ ವಿದ್ಯಾರ್ಥಿಗಳಿಗಾಗಿ ತಮ್ಮ ಮಿತಿಯಲ್ಲಿ ವಿಶೇಷ ಚಟುವಟಿಕೆಗಳನ್ನು ಆಯೋಜಿಸುವಂತೆ ಪ್ರತಿಯೊಬ್ಬ ಮುಖ್ಯ ಶಿಕ್ಷಕರ ಮನಮುಟ್ಟುವಂತೆ, ಒಬ್ಬ ಕ್ರಿಯಾಶೀಲ ಶಿಕ್ಷಕರಂತೆ ಪ್ರೋತ್ಸಾಹಿಸಿ, ವಿಶಿಷ್ಟ ರೀತಿಯಲ್ಲಿ ಮಾರ್ಗದರ್ಶನ ಮಾಡಿದರು.
ಜಿಲ್ಲೆಯಲ್ಲಿ ಏಕಕಾಲಕ್ಕೆ ನಾಲ್ಕು ವಿಶೇಷ ಪರೀಕ್ಷೆಗಳನ್ನು ನಡೆಸಲಾಗುವುದು. ಪ್ರಶ್ನೆ ಪತ್ರಿಕೆ ಜಿಲ್ಲಾ ಮಟ್ಟದಲ್ಲಿ ತಯಾರಿಸಿ, ಶಾಲಾ ಹಂತದಲ್ಲಿ ಪರೀಕ್ಷೆ ಸಂಘಟಿಸಿ, ಜಿಲ್ಲಾ ಹಾಗೂ ತಾಲೂಕು ಶಾಲಾ ಮಟ್ಟದಲ್ಲಿ ಎಲ್ಲಾ ಶಾಲೆಗಳ ಮಕ್ಕಳ ಫಲಿತಾಂಶ ವಿಶ್ಲೇಷಣೆ ಮಾಡಲಾಗುವುದು. ಫಲಿತಾಂಶ ಆಧರಿಸಿ ವಿದ್ಯಾರ್ಥಿಗಳ ಉತ್ತಮ ಫಲಿತಾಂಶಕ್ಕಾಗಿ ಚಟುವಟಿಕೆಗಳನ್ನು ರೂಪಿಸಿ ಎಂದರು.
ಕಾರ್ಯಕ್ರಮದಲ್ಲಿ ಉಪನಿರ್ದೇಶಕ ಜಿ.ಎಲ್. ಬಾರಾಟಕ್ಕೆ, ಆರ್.ಎಸ್. ಬುರಡಿ, ವಿ.ವಿ. ನಡುವಿನಮನಿ, ಎಚ್.ಬಿ. ರಡ್ಡೇರ ಮುಂತಾದವರು ಹಾಜರಿದ್ದರು.