ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಭಾರತೀಯ ಸೇನೆಯಲ್ಲಿ ಕಳೆದ 24 ವರ್ಷಗಳಿಂದ ಯೋಧರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಸಮೀಪದ ಮಂಜಲಾಪೂರ ಗ್ರಾಮದ ನಿಸಾರಅಹ್ಮದ್ ಹೊಸಮನಿ ತಾಯ್ನಾಡಿಗೆ ಆಗಮಿಸಿದ ಸಂದರ್ಭದಲ್ಲಿ ಅಖಿಲ ಕರ್ನಾಟಕ ಮಾಜಿ ಸೈನಿಕ ಸಂಘದ ಗದಗ ಜಿಲ್ಲಾ ಹಾಗೂ ತಾಲೂಕ ಘಟಕಗಳ ಪದಾಧಿಕಾರಿಗಳು, ಸದಸ್ಯರು ಹಾಗೂ ಅಭಿಮಾನಿಗಳು ಪಟ್ಟಣದಲ್ಲಿ ಅವರನ್ನು ಸ್ವಾಗತಿಸಿ ಅದ್ದೂರಿ ಮೆರವಣಿಗೆಯನ್ನು ನಡೆಸಿದರು.
ಪಟ್ಟಣದ ಮಾನ್ವಿ ಪೆಟ್ರೋಲ್ ಬಂಕ್‌ನಿಂದ ನಿವೃತ್ತ ಯೋಧನನ್ನು ಸೇರಿದ್ದ ನೂರಾರು ಜನರು ಆತ್ಮೀಯವಾಗಿ ಬರಮಾಡಿಕೊಂಡರು. ನಂತರ ತೆರೆದ ವಾಹನದಲ್ಲಿ ನಿಸಾರ ಅಹ್ಮದ್‌ರನ್ನು ಮೆರವಣಿಗೆಯಲ್ಲಿ ಬಜಾರ ರಸ್ತೆ, ಹಾವಳಿ ಹನುಮಂತದೇವರ ದೇವಸ್ಥಾನ, ದೂದನಾನಾ ದರ್ಗಾ, ಸೋಮೇಶ್ವರ ದೇವಸ್ಥಾನಗಳ ಮೂಲಕ ಹಾಯ್ದು ಮಂಜಲಾಪೂರದ ಅವರ ನಿವಾಸದವರೆಗೆ ಕರೆದೊಯ್ಯಲಾಯಿತು.
ಈ ಸಂದರ್ಭದಲ್ಲಿ ಸಂಘದ ಗದಗ ಜಿಲ್ಲಾಧ್ಯಕ್ಷ ಬಸಲಿಂಗಪ್ಪ ಮುಂಡರಗಿ ಮತ್ತು ಲಕ್ಷ್ಮೇಶ್ವರ ತಾಲೂಕ ಅಧ್ಯಕ್ಷ ಚನ್ನಬಸಪ್ಪ ಹುಡೇದ ಮಾತನಾಡಿ, ಭಾರತದ ಸೇನೆಗೆ ತನ್ನದೆ ಆದ ಗೌರವವಿದೆ. ಇಲ್ಲಿ ಸೇವೆ ಸಲ್ಲಿಸುವ ಅವಕಾಶ ದೊರಕಿದ ಪ್ರತಿಯೊಬ್ಬರೂ ಹೆಮ್ಮೆಯಿಂದ ಸೇವೆ ಮಾಡುತ್ತಾರೆ. ಕಳೆದ 24 ವರ್ಷಗಳಿಂದ ಸೇವೆ ಸಲ್ಲಿಸಿ ನಿವೃತ್ತರಾಗಿ ತಾಯ್ನಾಡಿಗೆ ಆಗಮಿಸಿದ ನಿಸಾರ ಅಹ್ಮದ ಅವರ ಮಾರ್ಗದರ್ಶನ ಮುಂದಿನ ದಿನಗಳಲ್ಲಿ ಯುವ ಸೈನಿಕರಿಗೆ ದೊರೆಯುಂತಾಗಲಿ ಎಂದು ಹೇಳಿದರು.
ನಿವೃತ್ತ ಯೋಧ ನಿಸಾರ ಅಹ್ಮದ ಮಾತನಾಡಿ, ಯೋಧರಿಗೆ ನಮ್ಮಲ್ಲಿರುವ ಗೌರವ ನಿಜಕ್ಕೂ ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿಯಾಗಿದ್ದು, ನಿವೃತ್ತರಾಗಿ ಬಂದ ನನಗೆ ನೀಡಿದ ಗೌರವಗಳನ್ನು ನೋಡಿ ಕಣ್ತುಂಬಿ ಬಂದಿದೆ ಎಂದರು.
ಈ ಸಂದರ್ಭದಲ್ಲಿ ರವಿ ಕರೆಣ್ಣವರ, ಹನುಮಂತಗೌಡ ಶೀಲವಂತರ, ಸಂಜೀವಣ್ಣವರ, ದೊಡ್ಡಪ್ಪ ಪೂಜಾರ, ನೀಲಪ್ಪ ಕನವಳ್ಳಿ, ಅಶೋಕ ಪ್ಯಾಟಿ, ಬಸವರಾಜ ಸೂರಣಗಿ, ಅಂಜುಮನ್ ಸಂಸ್ಥೆಯ ಅಧ್ಯಕ್ಷ ಎಂ.ಎಂ.ಗದಗ, ದಾದಾಪೀರ ಮುಚ್ಚಾಲೆ, ದಾದಾಪೀರ ತಂಬಾಕದ, ಸೂರಣಗಿ ಸೇರಿದಂತೆ ನೂರಾರು ಜನರು ಹಾಜರಿದ್ದರು.