ವಿಜಯಸಾಕ್ಷಿ ಸುದ್ದಿ, ಕಂಪ್ಲಿ: ನಮ್ಮ ರಾಜ್ಯದಲ್ಲಿ ಅನಾದಿ ಕಾಲದಿಂದಲೂ ವಾಸಿಸುತ್ತಿರುವ ಮರಾಠರು ಈ ರಾಜ್ಯದ ಅವಿಭಾಜ್ಯ ಅಂಗವಾಗಿದ್ದು, ಈ ಸಮುದಾಯದ ಅಭಿವೃದ್ಧಿಗಾಗಿ ಮರಾಠಾ ಸಮುದಾಯ ಅಭಿವೃದ್ದಿ ನಿಗಮ ಸ್ಥಾಪನೆಗೆ ಮುಂದಾಗಲಾಗಿದೆಯೇ ಹೊರತು ಇದರಲ್ಲಿ ಯಾವುದೇ ರಾಜಕೀಯ ಸ್ವಾರ್ಥವಿಲ್ಲವೆಂದು ಸರ್ಕಾರದ ತೀರ್ಮಾನವನ್ನು ಸಮಾಜ ಕಲ್ಯಾಣ ಖಾತೆ ಸಚಿವ ಬಿ.ಶ್ರೀರಾಮುಲು ಸಮರ್ಥಿಸಿಕೊಂಡರು.
ರವಿವಾರ ಪಟ್ಟಣಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದ ಮರಾಠರು ಕನ್ನಡಕ್ಕೆ ಆದ್ಯತೆ ಕೊಡುತ್ತಾ ಬಂದಿದ್ದಾರೆ. ಮರಾಠಿಗರ ಕಿರುಕುಳವನ್ನು ಖಂಡಿಸುತ್ತಿದ್ದಾರೆ. ಅವರು ರಾಜ್ಯದ ಅವಿಭಾಜ್ಯ ಅಂಗವಾಗಿದ್ದಂತೆ. ರಾಜಕೀಯಕ್ಕಾಗಿ ನಿಗಮ ಮಾಡಿಲ್ಲ. ಅವರು ಕನ್ನಡ ಉಳಿಸಬೇಕೆಂದು ತಮ್ಮ ಮಕ್ಕಳನ್ನು ಕನ್ನಡ ಶಾಲೆಯಲ್ಲಿ ಓದಿಸುತ್ತಿದ್ದಾರೆ. ಕನ್ನಡ ಪರ ಹೋರಾಟಗಳ್ನು ಮಾಡುತ್ತಾ ಬಂದಿದ್ದಾರೆ. ಅವರು ಸಾಮಾಜಿಕವಾಗಿ, ಶೈಕ್ಷಣಿಕವಾಗಿ,ಆರ್ಥಿಕವಾಗಿ ಅಭಿವೃದ್ದಿ ಹೊಂದಲು ಸೌಕರ್ಯಗಳು ದೊರಕಲು ಮರಾಠ ಸಮುದಾಯ ಅಭಿವೃದ್ದಿ ನಿಗಮ ಸ್ಥಾಪಿಸಲಾಗಿದೆ ಎಂದರು.
ಗಡಿ ಭಾಗದಲ್ಲಿ ಇಂದಿಗೂ ಮರಾಠಿ ನಾಮಫಲಕಗಳು ಇರುವ ಬಗ್ಗೆ ಪ್ರಶ್ನಿಸಿದಾಗ ಈ ಬಗ್ಗೆ ಸರ್ಕಾರ ಸೂಕ್ತವಾದ ಕ್ರಮಗಳನ್ನು ಕೈಗೊಳ್ಳಲಿದೆ. ಮಹಾರಾಷ್ಟ್ರಿಗರು ತಲೆ ಕೆಳಗೆ ಮಾಡಿ ಕಾಲು ಮೇಲೆ ಮಾಡಿದರೂ ನಮ್ಮ ಭಾಗದ ರಾಗಿಕಾಳಿನಷ್ಟು ಭೂಮಿಯನ್ನು ಮಹಾರಾಷ್ಟ್ರಕ್ಕೆ ಬಿಟ್ಟುಕೊಡುವುದಿಲ್ಲ. ಮರಾಠಿಗರ ಪುಂಡಾಟಿಕೆ ವಿರುದ್ಧ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು. ಕರ್ನಾಟಕದಲ್ಲಿನ ಮರಾಠಿಗರನ್ನು ರಕ್ಷಣೆ ಮಾಡುವುದು ನಮ್ಮ ಜವಬ್ದಾರಿ. ಗಡಿಭಾಗದಲ್ಲಿ ಸಂಪೂರ್ಣ ಕನ್ನಡ ಜಾರಿಗಾಗಿ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಂಸದೆ ಜೆ.ಶಾಂತಾ, ಪುರಸಭೆ ಅಧ್ಯಕ್ಷೆ ಶಾಂತಲಾ ವಿ.ವಿದ್ಯಾಧರ, ಪುರಸಭೆ ಸದಸ್ಯರು, ಮುಖಂಡರಾದ ಪಿ.ಬ್ರಹ್ಮಯ್ಯ, ಬಿ.ಸಿದ್ದಪ್ಪ, ಎನ್.ಪುರುಷೋತ್ತಮ, ಜ್ಯೋತಿ,ರಬಿಯಾ, ಉಷಾ, ಸಂಜಯ ಬೆಟಗೇರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.