ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ
ರಾಜ್ಯ ಸರಕಾರ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಈಗಾಗಲೇ ಜಾರಿಯಲ್ಲಿರುವ ಎಲ್ಲ ಯೋಜನೆಗಳನ್ನು ಮುಂದುವರೆಸಬೇಕು, ಸದರಿ ಯೋಜನೆಗಳನ್ನು ಮುಂದುವರಿಸಲು ಬೇಕಾಗುವ ಅನುದಾನವನ್ನು ಸಂಪೂರ್ಣವಾಗಿ ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿ ಮುಸ್ಲಿಂ ಚಿಂತಕರ ಚಾವಡಿಯಿಂದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಅಪರ ಜಿಲ್ಲಾಧಿಕಾರಿ ಎಂ.ಪಿ.ಮಾರುತಿ ಯವರ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಮನವಿ ಸಲ್ಲಿಸಿದ ಮುಸ್ಲಿಂ ಚಿಂತಕರ ಚಾವಡಿಯ ಪದಾಧಿಕಾರಿಗಳು ಕರ್ನಾಟಕ ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪನವರ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದ ಅಲ್ಪಸಂಖ್ಯಾತ ಸಮುದಾಯವಾದ ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಬುದ್ಧ, ಪಾರ್ಸಿ ಮತ್ತು ಜೈನ ಸಮುದಾಯಗಳ ಜನಪರ ಕಲ್ಯಾಣ ಯೋಜನೆಗಳಿಗೆ ನಿಗದಿಗೊಳಿಸಲಾದ ಅನುದಾನ ಕಡಿತಗೊಳಿಸಿರುವದನ್ನು ಈ ಮೂಲಕ ತೀವ್ರವಾಗಿ ಖಂಡಿಸಿತು.
ಸರಕಾರ ಬಂದ ಮೇಲೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಈ ಹಿಂದೆ ನಿಗದಿಗೊಳಿಸುತ್ತ ಬಂದಿರುವ ಅನುದಾನ ಕಡಿತಗೊಳಿಸಿದ್ದಲ್ಲದೇ ಹಲವು ಯೋಜನೆಗಳನ್ನು ರದ್ದು ಮಾಡಲಾಗಿದೆ. 2019-20ನೇ ಸಾಲಿನಲ್ಲಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಸರಕಾರ ಬಜೆಟ್‌ನಲ್ಲಿ ಘೋಷಿಸಿದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅನುದಾನವನ್ನು 1897.00ಕೋ.ರೂ.ಗಳಿಂದ 1571.00ಕೋ.ರೂ.ಗೆ ಕಡಿಮೆಗೊಳಿಸಿದೆ.
2020-22ನೇ ಸಾಲಿನಲ್ಲಿ ತಮ್ಮ ನೇತೃತ್ವದ ಸರಕಾರ ಮಂಡಿಸಿದ ಬಜೆಟ್‌ನಲ್ಲಿ 1177.00 ಕೋ.ರೂ. ಗಳಷ್ಟಿದ್ದ ಅನುದಾನವನ್ನು ಮತ್ತೆ ಕಡಿತಗೊಳಿಸಿ 1055.00ಕೋ.ರೂ. ಗಳಿಗೆ ನಿಗದಿಗೊಳಿಸಿದೆ.
ಇತ್ತೀಚಿಗೆ ಮತ್ತೆ 1055.00 ಕೋ.ರೂ.ಗಳಷ್ಟಿದ್ದ ಅನುದಾನದಲ್ಲಿ 50.00ಕೋ.ರೂ. ಅನುದಾನ ಕಡಿತಗೊಳಿಸಿದೆ. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಕಳೆದ 5 ವರ್ಷಗಳಿಂದ ಜಾರಿಯಲ್ಲಿಟ್ಟಿದ್ದ ಹಲವು ಜನಪರ ಕಲ್ಯಾಣ ಯೋಜನೆಗಳನ್ನು ಈಗ ಅನುದಾನ ಕಡಿತಗೊಳಿಸಿರುವುದರಿಂದ ಜಾರಿಗೊಳಿಸದೆ ನಿಲ್ಲಿಸಿದೆ. ಹಿಂದಿನ ಸರಕಾರಗಳು ಜಾರಿಯಲ್ಲಿಟ್ಟಿದ್ದ ಕಾಲೋನಿ ಅಭಿವೃದ್ದಿ ಯೋಜನೆ, ಶಾದಿಭಾಗ್ಯ ಯೋಜನೆಗಳನ್ನು ರದ್ದುಗೊಳಿಸಿದೆ.
ಇವೆಲ್ಲಕ್ಕಿಂತ ಪ್ರಮುಖ ಯೋಜನೆಗಳಾದ, ವಿದೇಶದಲ್ಲಿ ಉನ್ನತ ವ್ಯಾಸಂಗದ ಯೋಜನೆ, ನಾಗರೀಕ ಪರೀಕ್ಷೆ ತರಬೇತಿ ಯೋಜನೆ, ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರದ, ಮೆರಿಟ್-ಕಮ್ ಮೀನ್ಸ್ ವಿದ್ಯಾರ್ಥಿ ವೇತನ, ಶುಲ್ಕ ವಿನಾಯತಿ, ವಿದ್ಯಾಸಿರಿಯಂತಹ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾದಂತಹ ಯೋಜನೆಗಳ 2019-20ನೇ ಸಾಲಿನ ಅನುದಾನ ಸರಕಾರ ಇಲ್ಲಿಯವರೆಗೆ ಬಿಡುಗಡೆಗೊಳಿಸದೇ ಇರುವದು ವಿದ್ಯಾರ್ಥಿಗಳಿಗೆ ಸಾಕಷ್ಟು ಆರ್ಥಿಕ ತೊಂದರೆಯಾಗುತ್ತಿದೆ. ಅರ್ಜಿ ಸಲ್ಲಿಸಿದ ಅರ್ಹ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಈಗಲೂ ಅನುದಾನ ಬಿಡುಗಡೆಗೊಳಿಸದೇ ಇರುವುದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ಡೋಲಾಯನಮಾನವಾಗಿದೆ.
ವಿದ್ಯಾರ್ಥಿಗಳು ಪಾಲಕರು ಆತಂಕದಲ್ಲಿದ್ದಾರೆ. ಈ ಕೂಡಲೇ ಮುಖ್ಯಮಂತ್ರಿಗಳು ಇತ್ತ ಗಮನ ಹರಿಸಬೆಕು ಮತ್ತು ಅನುದಾನವನ್ನು ಸಂಪೂರ್ಣವಾಗಿ ಬಿಡುಗಡೆಗೊಳಿಸಬೇಕು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮುಸ್ಲಿಂ ಚಿಂತಕರ ಚಾವಡಿಯ ರಾಜ್ಯ ಉಪಾಧ್ಯಕ್ಷ ರಾಜಾಬಕ್ಷಿ ಎಚ್.ವಿ, ಕೆ.ಎಂ.ಸಯ್ಯದ್, ಅಂಜುಮನ್ ಸಂಸ್ಥೆಯ ಅಧ್ಯಕ್ಷ ಚಿಕನ್ ಪೀರಾ, ಟಿಪ್ಪು ಸುಲ್ತಾನ್ ಕಮಿಟಿಯ ಅಧ್ಯಕ್ಷ ಮೈಲೈಕ್ ಜಿಲಾನ್,ಸೈಯದ್ ಮೊಹಮ್ಮದ್ ಹುಸೇನಿ(ಚೋಟು), ಮುನೀರ್ ಸಿದ್ದಿಕಿ, ಮೊಹ್ಮದ್ ಅಲೀಮುದ್ದೀನ್, ಸಲಿಂ ಮಂಡಲಗೇರಿ, ಸಲಿಂ ಅಳವಂಡಿ, ಎ.ಎಚ್.ಅತ್ತನೂರ, ಜಾಫರ್ ಫಹಿಮಾಶಿ, ಡಾ.ಪಾಶಾ ಎಚ್.ವಿ, ಪೀರಸಾಬ ಬೆಳಗಟ್ಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು.