ಪರಸ್ಪರ ವಿಶ್ವಾಸದಿಂದ ಸಂಸಾರ ನಡೆಸಿ : ಡಾ.ಕೊಟ್ಟೂರೇಶ್ವರ ಸ್ವಾಮೀಜಿ

0
Sharan's Tattva Dhanthya Discourse Concluding and Mass Marriage Program
Spread the love

ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ : ಬ್ರಹ್ಮಚರ್ಯ, ವಾನಪ್ರಸ್ಥ, ಗೃಹಸ್ಥ ಮತ್ತು ಸನ್ಯಾಸ ಆಶ್ರಮಗಳಲ್ಲಿ ಗೃಹಸ್ಥಾಶ್ರಮವೇ ಶ್ರೇಷ್ಠವಾದದ್ದು. ಈ ದಿಸೆಯಲ್ಲಿ 12ನೇ ಶತಮಾನದ ಹೆಚ್ಚಿನ ಶರಣರು ಗೃಹಸ್ಥಾಶ್ರಮದಲ್ಲಿದ್ದುಕೊಂಡೇ ಸಾಧನೆ ಮಾಡಿದ್ದಾರೆ ಎಂದು ಡಾ. ಕೊಟ್ಟೂರೇಶ್ವರ ಸ್ವಾಮೀಜಿ ಹೇಳಿದರು.

Advertisement

ಇಲ್ಲಿಯ ಅನ್ನದಾನೀಶ್ವರ ಶಾಖಾ ಮಠದಲ್ಲಿ ಶ್ರಾವಣ ಮಾಸದಂಗವಾಗಿ ಹಮ್ಮಿಕೊಂಡಿದ್ದ ಶರಣರ ತತ್ವ ಚಿಂತನೆಯ ಪ್ರವಚನ ಸಮಾರೋಪ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಶರಣ ತತ್ವವೆಂದರೆ, ಇರುವುದರಲ್ಲಿಯೇ ತೃಪ್ತಿಪಟ್ಟುಕೊಳ್ಳುವುದಾಗಿದೆ. ಈ ಸರಳ ಜೀವನವನ್ನು ಅಳವಡಿಸಿಕೊಳ್ಳಬೇಕೆಂದರೆ ಶರಣರ ಆಚಾರ-ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ನೂತನ ದಂಪತಿಗಳು ಪರಸ್ಪರ ವಿಶ್ವಾಸದಿಂದ ಸಂಸಾರದಲ್ಲಿ ತೊಡಗಿಕೊಳ್ಳಬೇಕು. ದುಶ್ಚಟದಿಂದ ದೂರವಿದ್ದು ಸಂಸ್ಕಾರವಂತರಾದರೆ ಮಾತ್ರ ತಮ್ಮ ಸಂತಾನ ಭಾಗ್ಯದ ಮಗುವು ಉತ್ತಮವಾಗಿರುತ್ತದೆ ಎಂದು ಸಲಹೆ ನೀಡಿದರು.

ಡಾ. ಗಿರಿಜಾ ಹಸಬಿ ಮಾತನಾಡಿ, ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳೆಂಬ ಅರಿಷಡ್ವರ್ಗಗಳನ್ನು ಸಕಾರಾತ್ಮವಾಗಿ ಅಳವಡಿಸಿಕೊಳ್ಳಬೇಕು. ಕೇವಲ ನಮ್ಮಷ್ಟಕ್ಕೆ ನಾವು ಬದುಕಿದರೆ ಸಾಲದು.

ವಿಶ್ವ ಸಂಸ್ಥೆ ಹೇಳಿದಂತೆ ಒಂದು ಕುಟುಂಬವು ಸಾಮಾಜಿಕ, ನೈತಿಕ, ಆರ್ಥಿಕ ಮತ್ತು ಧಾರ್ಮಿಕತೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಮಾತ್ರ ಆರೋಗ್ಯವಂತ ಕುಟುಂಬವಾಗಿರಲು ಸಾಧ್ಯವಾಗುತ್ತದೆ. ಈ ದಿಸೆಯಲ್ಲಿ 12ನೇ ಶತಮಾನದ ಅಜ್ಜಗಣ್ಣ-ಮುಕ್ತಾಯಕ್ಕರ ಬದುಕು ನಮಗೆಲ್ಲಾ ಪ್ರೇರಣೆಯಾಗಿದೆ ಎಂದರು.

ಗ್ರಾ.ಪಂ ಅಧ್ಯಕ್ಷ ಕೆ.ಎಸ್. ಪೂಜಾರ ಮಾತನಾಡಿ, ಗ್ರಾಮದಲ್ಲಿರುವ ಮಠ-ಮಾನ್ಯಗಳಲ್ಲಿ ನಿರಂತರವಾಗಿ ನಡೆಯುವ ಧಾರ್ಮಿಕ ಕಾರ್ಯಗಳೇ ನಮಗೆ ಸ್ಪೂರ್ತಿಯಾಗಿದ್ದು, ಮಠಗಳ ಅಭಿವೃದ್ಧಿಗೆ ಸಹಾಯ-ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಶಂಕ್ರಯ್ಯ ಹಿರೇಮಠ ಸಾಮೂಹಿಕ ವಿವಾಹದ ವಿಧಿ-ವಿಧಾನಗಳನ್ನು ನಡೆಸಿಕೊಟ್ಟರು. ಅನ್ನದಾನೀಶ್ವರ ಸೇವಾ ಸಮಿತಿಯ ಅಧ್ಯಕ್ಷ ಮಾರ್ಕೆಂಡಪ್ಪ ಗಡ್ಡದ ಅಧ್ಯಕ್ಷತೆ ವಹಿಸಿದ್ದರು. ಕಿತ್ತಲಿ ಗ್ರಾಮದ ಮಂಜುನಾಥ ಶ್ರೀಗಳು, ನರಸಾಪೂರ ಅನ್ನದಾನೀಶ್ವರ ಮಠದ ವೀರೇಶ್ವರ ಶ್ರೀಗಳು, ಗ್ರಾ.ಪಂ ಉಪಾಧ್ಯಕ್ಷೆ ಪುಷ್ಪಾ ಪಾಟೀಲ, ಸದಸ್ಯರಾದ ಅನಸಮ್ಮ ಅಂಬಕ್ಕಿ, ಲಕ್ಷ್ಮವ್ವ ಭಜಂತ್ರಿ, ಅನ್ನಪೂರ್ಣ ರಿತ್ತಿ, ವಿರೂಪಾಕ್ಷಪ್ಪ ಬೆಟಗೇರಿ, ಇಂಜಿನಿಯರ್ ಅಶೋಕ ಕಣವಿ, ಅಂಗನವಾಡಿ ಮೇಲ್ವಿಚಾರಕಿ ಶಾಹೀದಬೇಗಂ ಹತ್ತಿವಾಲೆ, ಕವಿತಾ ಬಡಿಗೇರ ವೇದಿಕೆಯಲ್ಲಿದ್ದರು.

ಷಡಕ್ಷರಯ್ಯ ಬದ್ನಿಮಠ, ಬಸನಗೌಡ ಪಾಟೀಲ ಸಂಗೀತ ಸೇವೆ ನೀಡಿದರು. ನಿವೃತ್ತ ಶಿಕ್ಷಕ ಅಶೋಕ ಬೂದಿಹಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಸೇವೆ ಸಲ್ಲಿಸಿದ ಮಹನೀಯರನ್ನು ಸನ್ಮಾನಿಸಲಾಯಿತು. ಶಿಕ್ಷಕ ಬಿ.ಎಸ್. ಕಣವಿ ಸ್ವಾಗತಿಸಿದರು. ಅಂಬರೀಶ ಕರೆಕಲ್ಲ ನಿರೂಪಿಸಿದರು. ಶಿವಯೋಗಿ ಡಿಗ್ಗಾವಿ ವಂದಿಸಿದರು.

ನಿವೃತ್ತ ಯೋಧ ದತ್ತಾತ್ರೇಯ ಜೋಶಿ ಮಾತವನಾಡಿ, ಜೀವನದ 4 ಆಶ್ರಮಗಳಲ್ಲಿ ಗೃಹಸ್ಥಾಶ್ರಮವೇ ಎಲ್ಲ ಆಶ್ರಮಗಳಿಗೆ ಆಶ್ರಯ ಕೊಡುವದು. ಆದ್ದರಿಂದ ಸಂಸಾರದಲ್ಲಿರುವವರು ಜೀವನ ಯಶಸ್ವಿಗೊಳ್ಳಲು ಚತುರ್ವೇದದ ಪ್ರಕಾರ ಧರ್ಮ, ಅರ್ಥ, ಕಾಮ, ಮತ್ತು ಮೋಕ್ಷ ಇವುಗಳ ಬಗ್ಗೆ ಅರಿತುಕೊಂಡು ಜೀವನ ಸಾರ್ಥಕಪಡಿಸಿಕೊಳ್ಳಬೇಕು ಎಂದರು.


Spread the love

LEAVE A REPLY

Please enter your comment!
Please enter your name here