ಸೌಹಾರ್ದಯುತ ಸಹಬಾಳ್ವೆ ಜೀವನದ ಉಸಿರಾಗಲಿ : ರಂಭಾಪುರಿ ಶ್ರೀಗಳು

0
Inauguration ceremony of Shri Someshwara Sabha Bhavan
Spread the love

ವಿಜಯಸಾಕ್ಷಿ ಸುದ್ದಿ, ಶಿವಮೊಗ್ಗ : ಮಾನವನಿಗೆ ಸಂಸ್ಕಾರ ದೊರೆತರೆ ಬೆಲೆಯುಳ್ಳ ಬದುಕು ಸಾರ್ಥಕಗೊಳ್ಳುತ್ತದೆ. ಉನ್ನತ ಗುರಿ ಮತ್ತು ಧ್ಯೇಯ ವ್ಯಕ್ತಿತ್ವ ವಿಕಾಸಕ್ಕೆ ದಾರಿದೀಪ. ಪರಸ್ಪರ ಸಹಕಾರದಿಂದ ಸರ್ವೋನ್ನತಿ ಸಾಧ್ಯ.
ಸೌಹಾರ್ದಯುತ ಸಹಬಾಳ್ವೆ ಜೀವನದ ಉಸಿರಾಗಬೇಕೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಗುರುವಾರ ಶ್ರೀ ಬಸವೇಶ್ವರಸ್ವಾಮಿ ಪಟ್ಟಣ ಪತ್ತಿನ ಸಹಕಾರ ಸಂಘದ ನೂತನ ಕಾರ್ಯಾಲಯ ಉದ್ಘಾಟನೆ ಹಾಗೂ ಸ್ವಯಂಭು ಶ್ರೀ ಸೋಮೇಶ್ವರ ಸಭಾಭವನ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಸತ್ಯಾನ್ವೇಷಣೆಯ ಹಾದಿಯಲ್ಲಿ ನಡೆದಾಗ ಜೀವನ ಮೌಲ್ಯ ಸಮೃದ್ಧಿಯಾಗುತ್ತದೆ. ಸತ್ಯ-ಶಾಂತಿ ಎಲ್ಲರ ಬಾಳಿಗೆ ಅಗತ್ಯ. ಆಹಾರ-ನೀರಿನಿಂದ ಮನುಷ್ಯ ದೈಹಿಕವಾಗಿ ಬಲಗೊಂಡರೆ ಧರ್ಮ ಮತ್ತು ಧರ್ಮಾಚರಣೆಯಿಂದ ಜೀವನ ವಿಕಾಸಗೊಳ್ಳುತ್ತದೆ. ಮನುಷ್ಯನಲ್ಲಿ ಕರ್ತವ್ಯ, ಶಿಸ್ತು, ಶೃದ್ಧೆ, ಛಲ, ಸಮರ್ಪಣಾ ಮನೋಭಾವ ಬೆಳೆಸಿಕೊಳ್ಳಬೇಕು. ದೇಹವನ್ನು ದುಡಿಮೆಗೆ ಮನಸ್ಸನ್ನು ಭಗವಂತನಿಗೆ ಅರ್ಪಿಸಿ ಮುನ್ನಡೆದರೆ ಜೀವನ ಸುಖಮಯವಾಗುತ್ತದೆ. ಸಿದ್ಧಾಂತ ರಹಿತ ಜೀವನವು ದಿಕ್ಸೂಚಿ ಇಲ್ಲದ ನೌಕೆಯಂತೆ ನಮ್ಮ ಬದುಕಾಗಬಾರದು.
ಇನ್ನೊಬ್ಬರಿಗೆ ನಮ್ಮ ಬದುಕು ಮಾದರಿಯಾಗಬೇಕಲ್ಲದೇ ಮಾರಕವಾಗಬಾರದು. ಶ್ರೀ ಬಸವೇಶ್ವರಸ್ವಾಮಿ ಪತ್ತಿನ ಸಹಕಾರ ಸಂಘದಿಂದ ಸ್ವಯಂಭು ಶ್ರೀ ಸೋಮೇಶ್ವರ ಸಭಾಭವನ ಸುಂದರವಾಗಿ ಭವ್ಯವಾಗಿ ನಿರ್ಮಿಸಿದ್ದನ್ನು ಕಂಡು ಅತ್ಯಂತ ಸಂತೋಷವಾಗಿದೆ. ಇದಕ್ಕಾಗಿ ಶ್ರಮಿಸಿದ ಸರ್ವರಿಗೂ ಹೃದಯ ತುಂಬಿದ ಶುಭ ಹಾರೈಕೆಗಳು ಎಂದರು.
ಸಂಘದ ಮಾಜಿ ಅಧ್ಯಕ್ಷ ಹೆಚ್.ವಿ. ಮಹೇಶ್ವರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘ 99 ವರ್ಷಗಳಿಂದ ನಡೆದು ಬಂದ ದಾರಿಯನ್ನು ಸವಿಸ್ತಾರವಾಗಿ ತಿಳಿಸಿದರು. ಸಂಘದ ಅಧ್ಯಕ್ಷ ಕೆ.ಎಸ್. ತಾರಾನಾಥ್ ಅಧ್ಯಕ್ಷತೆ ವಹಿಸಿದ್ದರು.
ಎಡೆಯೂರು ರೇಣುಕ ಶಿವಾಚಾರ್ಯರು, ಮಳಲಿ ಡಾ. ನಾಗಭೂಷಣ ಶಿವಾಚಾರ್ಯರು, ಬಿಳಕಿ ರಾಚೋಟೇಶ್ವರ ಶಿವಾಚಾರ್ಯರು ನೇತೃತ್ವ ವಹಿಸಿದ್ದರು.
ಶಾಸಕ ಎಸ್.ಎನ್. ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ, ಕ.ರಾ. ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ, ಸೂಡಾ ಅಧ್ಯಕ್ಷ ಹೆಚ್.ಎಸ್. ಸುಂದರೇಶ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಕೆ. ಮರಿಯಪ್ಪ, ನಿರ್ದೇಶಕರಾದ ಮಹಾಲಿಂಗಯ್ಯ ಶಾಸ್ತಿç, ಜಿ.ಎನ್. ಸುಧೀರ್, ಶ್ರೀ ಬಸವೇಶ್ವರ ವೀ.ಸ.ಸೇ. ಸಂಘದ ಅಧ್ಯಕ್ಷ ಎಸ್.ಎಸ್. ಜ್ಯೋತಿಪ್ರಕಾಶ್, ಅ.ಭಾ.ವೀ. ಮಹಾಸಭಾ ಜಿಲ್ಲಾಧ್ಯಕ್ಷ ಎಸ್.ಎನ್. ರುದ್ರಮುನಿ, ಎಂ. ಶ್ರೀಕಾಂತ, ಮಾಜಿ ಶಾಸಕ ಹೆಚ್.ಎಂ. ಚಂದ್ರಶೇಖರಪ್ಪ, ನಾಗಭೂಷಣ ಕಲ್ಮನೆ, ಆರ್.ತೇಜೋಮೂರ್ತಿ, ಟಿ.ವಿ. ಶ್ರೀನಿವಾಸ್ ಭಾಗವಹಿಸಿದ್ದರು.
ಹೆಚ್.ಎಸ್. ಶಂಕರ್, ಹೆಚ್.ಎನ್. ಬಸವರಾಜ್, ಹೆಚ್.ಎಂ. ತಿಪ್ಪೇಸ್ವಾಮಿ, ಕೆ.ಸಿ. ನಾಗರಾಜ್, ವಿ.ಸಿ.ಎಸ್. ಮೂರ್ತಿ, ಬಾರಂದೂರು ಪ್ರಕಾಶ, ರಾಜೇಶ್ ಸುರಗೀಹಳ್ಳಿ, ಕೆ.ರವಿಚಂದ್ರ, ಅನಿತಾ ರವಿಶಂಕರ್, ಮಾಲತೇಶ ಸಿ.ಹೆಚ್., ಜೆ. ಸೋಮಶೇಖರ್, ಶೈಲಜಾ ಪರಮೇಶ್ವರ ಹಾಗೂ ಮಲ್ಲಿಕಾರ್ಜುನ ಎಸ್.ಪಿ. ಇವರಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆ ನೀಡಿ ಆಶೀರ್ವದಿಸಿದರು.
ನೂತನ ಸಭಾ ಭವನವನ್ನು ಉದ್ಘಾಟಿಸಿದ ಮಾಜಿ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಮಾತನಾಡಿ, ಶಿವಮೊಗ್ಗ ಜಿಲ್ಲೆ ಸರ್ವಾಂಗೀಣ ಪ್ರಗತಿ ಹೊಂದಿದ್ದು ಸಹಕಾರಿ ರಂಗದಲ್ಲಿಯೂ ಕೂಡ ಅಗ್ರ ಸ್ಥಾನದಲ್ಲಿದೆ. ಸಹಕಾರಿ ಸಂಸ್ಥೆಗಳು ಬೆಳೆಯಲು ಜನತೆಯ ಸಹಕಾರವೂ ಅವಶ್ಯಕವಾಗಿದೆ. ಶ್ರೀ ಬಸವೇಶ್ವರಸ್ವಾಮಿ ಪಟ್ಟಣ ಪತ್ತಿನ ಸಹಕಾರ ಸಂಘ ಎಲ್ಲರ ಸಹಕಾರದಿಂದ ಉತ್ತಮ ಲಾಭಾಂಶ ಹೊಂದಿ ಮುನ್ನಡೆಯುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.

Spread the love
Advertisement

LEAVE A REPLY

Please enter your comment!
Please enter your name here