ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದ ಮುಖ್ಯ ಬಜಾರ್ ಸೇರಿ ಸೋಮೇಶ್ವರ ಪಾದಗಟ್ಟಿ, ಪಾದಗಟ್ಟಿ, ಪುರಸಭೆ, ಶಿಗ್ಲಿ ವೃತ್ತದಲ್ಲಿ ಶುಕ್ರವಾರ ಸಂತೆಯ ದಿನ ಎಲ್ಲೆಂದರಲ್ಲಿ ಬೈಕ್ ನಿಲ್ಲಿಸಿದ, ನಿಯಮ ಉಲ್ಲಂಘಿಸಿದ ಬೈಕ್ ಸವಾರರಿಗೆ ಪೊಲೀಸರು ಬಿಸಿ ಮುಟ್ಟಿಸಿದರು.
ನಂಬರ್ ಪ್ಲೇಟ್ ಇಲ್ಲದ, ನಂಬರ್ ಪ್ಲೇಟ್ ತಿರುಚಿದ, ಲೈಸೆನ್ಸ್ ಇಲ್ಲದ, ತ್ರಿಬಲ್ ರೈಡಿಂಗ್, ಹೆಲ್ಮೆಟ್ ಧರಿಸದ ಹೀಗೆ ನಿಯಮ ಪಾಲಿಸದ ಬೈಕ್ ಸವಾರರಿಂದ ಸಾಕಷ್ಟು ತೊಂದರೆ ಆಗುವುದನ್ನು ಮನಗಂಡ ಸಿಪಿಐ ನಾಗರಾಜ ಮಾಡಳ್ಳಿ ನೇತೃತ್ವದಲ್ಲಿ ಪಿಎಸ್‌ಐ ಈರಪ್ಪ ರಿತ್ತಿ ಪೊಲೀಸ್ ತಂಡ ಮತ್ತು ಹೋಂಗಾರ್ಡ್‌ಗಳ ಸಹಕಾರದೊಂದಿಗೆ ಕಾರ್ಯಾಚರಣೆ ಕೈಗೊಂಡು ನೂರಕ್ಕೂ ಹೆಚ್ಚು ಬೈಕ್ ವಶಕ್ಕೆ ಪಡೆದು ದಂಡ ವಿಧಿಸಿ ಬಿಸಿ ಮುಟ್ಟಿಸಿದರು.
ಈ ವೇಳೆ ಮಾತನಾಡಿದ ಪಿಎಸ್‌ಐ ಈರಪ್ಪ ರಿತ್ತಿ, ಪಟ್ಟಣದಲ್ಲಿ ಟ್ರಾಫಿಕ್ ಸಮಸ್ಯೆ ನಿಯಂತ್ರಣಕ್ಕೆ ಥರ್ಡ್ ಐ ಸಿಸಿ ಕ್ಯಾಮರಾ, ಆಯಕಟ್ಟಿನ ಸ್ಥಳದಲ್ಲಿ ಪೊಲೀಸ್ ನಿಯೋಜನೆ ಮಾಡಿದರೂ ಬೈಕ್/ವಾಹನ ಸವಾರರು ನಿಯಮ ಪಾಲಿಸುತ್ತಿಲ್ಲ. ಸಿಸಿ ಕ್ಯಾಮರಾದಿಂದ ತಪ್ಪಿಸಿಕೊಳ್ಳಲು ನಂಬರ್ ಪ್ಲೇಟ್ ತಿರುಚುವುದು, ತಿದ್ದುವುದು, ನಂಬರ್ ಪ್ಲೇಟ್ ತೆಗೆಯುವುದು ಸೇರಿ ಅಡ್ಡ ಮಾರ್ಗ ಅನುಸರಿಸುತ್ತಿರುವುದು ಪೊಲೀಸರಿಗೆ ಗೊತ್ತಿಲ್ಲವೆಂದೇನಿಲ್ಲ.
ಅದಕ್ಕಾಗಿ ಇನ್ನು ಮುಂದಿನ ದಿನಗಳಲ್ಲಿ ಪೊಲೀಸ್ ಇಲಾಖೆಯಿಂದ ಹದ್ದಿನ ಕಣ್ಣಿಟ್ಟು ಶಿಸ್ತು ಕ್ರಮ, ಹೆಚ್ಚಿನ ದಂಡ ವಿಧಿಸಲಾಗುವುದು. ಆದ್ದರಿಂದ ಎಲ್ಲರೂ ಸಂಚಾರಿ ನಿಯಮಗಳನ್ನು ಪಾಲಿಸಲೇಬೇಕು. ಗಣಪತಿ ಹಬ್ಬದ ಹಿನ್ನೆಲೆಯಲ್ಲಿ ಮುಖ್ಯ ಬಜಾರ್ ರಸ್ತೆಯಲ್ಲಿ ಸಂಚಾರ ದಟ್ಟಣೆ ನಿಯತ್ರಣಕ್ಕಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಬೈಕ್, ವಾಹನ ಸವಾರರು ಎಚ್ಚರಿಕೆ ವಹಿಸಬೇಕು ಮತ್ತು ಪೊಲೀಸರ ಕಾರ್ಯಕ್ಕೆ ಸಹಕರಿಸಬೇಕು ಎಂದರು.
ಕಾರ್ಯಾಚರಣೆಯಲ್ಲಿ ಎಎಸ್‌ಐ ಎಸ್.ಎಸ್. ಮಕಾಂದಾರ, ಪ್ರಕಾಶ ಮ್ಯಾಗೇರಿ, ಅಪ್ಪಣ್ಣ ರಾಠೋಡ, ರೇಣುಕಾರಾದ್ಯ ಅಕ್ಕಿಗುಂದಮಠ, ಮಹಾಂತೇಶ ಐಗಾರ್, ಬಿ.ಜಿ. ದಾಸಪ್ಪನವರ ಸೇರಿ ಪೊಲೀಸ್ ಮತ್ತು ಹೋಮ್ ಗಾರ್ಡ್ ಸಿಬ್ಬಂದಿಗಳು ಇದ್ದರು.