ವಿಜಯನಗರ:- ಪೂಜೆ ಹೆಸರಲ್ಲಿ ಇಡೀ ಗ್ರಾಮಕ್ಕೆ ದುರುಳರು ಕೋಟಿ ಕೋಟಿ ಹಣ ಪಂಗನಾಮ ಹಾಕಿದ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಕಲ್ಲಹಳ್ಳಿ ತಾಂಡಾದಲ್ಲಿ ಜರುಗಿದೆ.
1 ಲಕ್ಷಕ್ಕೆ 10 ಲಕ್ಷ ಹಣ ಮಾಡಿ ಕೊಡ್ತೀವಿ ಅಂತಾ ಗ್ರಾಮದ ಜನರಿಗೆ ಮಕ್ಮಲ್ ಟೋಪಿ ಹಾಕಿದ್ದು, ಒಂದಲ್ಲ, ಎರಡಲ್ಲ, ಹತ್ತು ಪಟ್ಟು ದುಡ್ಡು ಡಬ್ಲಿಂಗ್ ಮಾಡಿ ಕೊಡ್ತೀವಿ ಅಂತಾ ಮಹಾಮೋಸ ಮಾಡಿದ್ದಾರೆ. ಆರು ತಿಂಗಳಲ್ಲಿ ಗ್ರಾಮವೊಂದರಲ್ಲಿ 60ಕ್ಕೂ ಹೆಚ್ಚು ಜನರಿಂದ 2 ಕೋಟಿಗೂ ಅಧಿಕ ಹಣ ಲೂಟಿ ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ.
ಈ ಖದೀಮರು ಮೊದಲು, ನಿಮಗೆ ಕಷ್ಟ ಇದೆಯಾ, ಆರು ತಿಂಗಳಲ್ಲಿ ನಿಮ್ಮ ಕಷ್ಟ ಪರಿಹಾರ ಮಾಡ್ತೀವಿ ಅಂತಾ ಆಸೆ ತೋರಿಸುತ್ತಾರೆ. ಬಳಿಕ ಮನೆಗೆ ಬಂದು ರಾತ್ರಿ ವೇಳೆ ಪೂಜೆ ಮಾಡಿ ಹಣ ಇಡ್ತಿದ್ರು. ಎಲ್ಲರ ಮೊಬೈಲ್ ಪೋನ್ ಪ್ಲೈಟ್ ಮೂಡಿಗೆ ಹಾಕಿಸಿ, ಲೈಟ್ ಆಫ್ ಮಾಡಿ ಪೂಜೆ ಮಾಡಿಸುತ್ತಿದ್ದರು.
ಪೂಜೆ ನಂತರ ಬಾಕ್ಸ್ ವೊಂದರಲ್ಲಿ ಲಕ್ಷಾಂತರ ಹಣ ಇಟ್ಟು ಪ್ಯಾಕ್ ಮಾಡಬಹುದಾ ಅಂತಾ ಕೇಳುತಿದ್ರು. ಮಾಡಿ ಅಂದಾಗ ನೀವು ಹೊರಗೆ ಹೋಗಿ ನಾವು ಪೂಜೆ ಮಾಡಿ ಮತ್ತೆ ಪ್ಯಾಕ್ ಮಾಡಬೇಕು ಅಂತಾ ಮನೆಯವ್ರನ್ನ ಹೊರಗೆ ಕಳಿಸುತ್ತಿದ್ರು. ಆಮೇಲೆ ಇದನ್ನ 168 ದಿನಗಳವರೆಗೆ ತೆಗೆಯಬಾರದು ಆಮೇಲೆ ಇದರಲ್ಲಿನ ಹಣ 10 ಪಟ್ಟು ಹೆಚ್ಚಾಗುತ್ತೆ ಅಂತಾ ಹೇಳ್ತಿದ್ರು. ಈ ಮೂಲಕ ವಂಚನೆ ಮಾಡುತ್ತಿದ್ದದ್ದು ಬಟಾ ಬಯಲಾಗಿದೆ.
ಇನ್ನೂ ಗ್ರಾಮದ ಜನರಿಗೆ ನ್ಯಾಯ ಹೇಳ್ತಿದ್ದವರಿಂದಲೇ ಮಹಾಮೋಸ ನಡೀತಾ ಎಂಬ ಸಂಶಯ ಮೂಡಿದೆ. ತಾಂಡಾಗಳಲ್ಲಿ ಕಾರಬಾರಿ ಎನ್ನೋ ಮನೆತನದವ್ರು ತಾಂಡಾದ ಜನ್ರಿಗೆ ನ್ಯಾಯ ಹೇಳುವಂತವ್ರು. ಆ ಮನೆಯವ್ರ ಮಾತು ಕೇಳಿ ಇದೀಗ ತಾಂಡಾದ ನೂರಾರು ಜನ್ರು ಮೋಸಕ್ಕೆ ಒಳಗಾಗಿದ್ದಾರೆ.
ಮೋಸಹೋದ ಕಲ್ಲಹಳ್ಳಿ ತಾಂಡಾದ ನಿವಾಸಿ ಕುಮಾರ ನಾಯ್ಕ್ ಎನ್ನುವವರು ಹೊಸಪೇಟೆ ಗ್ರಾಮೀಣ ಠಾಣೆಗೆ ದೂರು ನೀಡಿದ್ದಾರೆ.
ದೂರಿನ ಮೇರೆಗೆ ಗ್ರಾಮೀಣ ಪೊಲೀಸರು ಕಾರ್ಯಚರಣೆ ಮಾಡಿ ಮೂವರನ್ನ ಅರೆಸ್ಟ್ ಮಾಡಿದ್ದಾರೆ. ರಾಜಸ್ಥಾನ ಮೂಲದ ಜಿತೇಂದ್ರ ಸಿಂಗ್, ಆತನಿಗೆ ಸಹಕರಿಸುತ್ತಿದ್ದ ಕಲ್ಲಹಳ್ಳಿ ಗ್ರಾಮದ ತುಕ್ಯಾ ನಾಯ್ಕ್, ಶಂಕು ನಾಯ್ಕ್ ನನ್ನು ಬಂಧಿಸಲಾಗಿದೆ.
ಬಂಧಿತರಿಂದ ಬರೋಬ್ಬರಿ 35 ಲಕ್ಷ ನಗದು ಹಣ, ನೋಟು ಎಣಿಸುವ 1 ಯಂತ್ರ, ಟಾವೆಲ್, ಜಮ್ಕಾನ್ ಜಪ್ತಿ ಮಾಡಲಾಗಿದೆ. ಜಿತೇಂದ್ರನ ಚಿತ್ರದುರ್ಗದ ಮನೆಯಲ್ಲಿಯೂ ಪೊಲೀಸರು ತಪಾಸಣೆ ಮಾಡಿದ್ದಾರೆ. ಪ್ರಮುಖ ಆರೋಪಿಗಳಾದ ಕಲ್ಲಹಳ್ಳಿ ಗ್ರಾಮದ ಸ್ವಾಮಿ ನಾಯ್ಕ್, ಕಾರಬಾರಿ ವೆಂಕ್ಯಾ ನಾಯ್ಕ್ ಎಸ್ಕೇಪ್ ಆಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರಿಂದ ಶೋಧ ಮುಂದುವರಿದಿದೆ.