ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ಇತ್ತೀಚಿನ ದಿನಗಳಲ್ಲಿ ಟಿವಿ, ಮೊಬೈಲ್, ಸಮಾಜಿಕ ಜಾಲತಾಣಗಳ ಭರಾಟೆಯಲ್ಲಿ ಗ್ರಾಮೀಣ ಕ್ರೀಡೆಗಳು ಮರೆಯಾಗುತ್ತಿವೆ. ಇಂತಹ ಸಂದರ್ಭದಲ್ಲಿ ನಮ್ಮ ಗ್ರಾಮೀಣ ಕ್ರೀಡೆಗಳನ್ನು ಉಳಿಸಿ, ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಹಾಲಕೆರೆ ಗ್ರಾಮ ಪಂಚಾಯತ್ ಅಧ್ಯಕ್ಷ ಗಿರೀಶಗೌಡ ಮುಲ್ಕಿಪಾಟೀಲ ಹೇಳಿದರು.
ಸಮೀಪದ ಹಾಲಕೆರೆ ಗ್ರಾಮದಲ್ಲಿ ಗಣೇಶೋತ್ಸವದ ಅಂಗವಾಗಿ ಶ್ರೀ ಗಜಾನನ ಗೆಳೆಯರ ಬಳಗ ಆಯೋಜಿಸಿದ್ದ ನಿಧಾನಗತಿ ಬೈಕ್ ಓಡಿಸುವ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದರಿಂದ ಕ್ರೀಡಾಭಿಮಾನ ಮೂಡುವ ಜತೆಗೆ ಮಾನಸಿಕ, ದೈಹಿಕ ಆರೋಗ್ಯ ವೃದ್ಧಿಗೆ ಸಹಕಾರಿಯಾಗುವುದು. ಗೆಲುವಿಗೆ ಪ್ರಯತ್ನಿಸುವ ರೀತಿ ವಿಶೇಷವಾಗಿರುತ್ತದೆ. ಕೆಲ ಜನಪ್ರಿಯ ಕ್ರೀಡೆಗಳ ನಡುವೆ ಗ್ರಾಮೀಣ ಕ್ರೀಡೆಗಳು ಸ್ಪರ್ಧೆ ಮಾಡಲು ಆಗದೆ ಸೊರಗುತ್ತಿವೆ. ಇಂತಹ ಕ್ರೀಡೆಗಳನ್ನು ಆಯೋಜಿಸುವುದರಿಂದ ನಮ್ಮ ಗ್ರಾಮೀಣ ಕ್ರೀಡೆಗಳ ಬಗ್ಗೆ ಜನರಲ್ಲಿ ಅರಿವು ಮೂಡುತ್ತದೆ. ಸ್ಪರ್ಧೆಯನ್ನು ಪ್ರೋತ್ಸಾಹಿಸಿ ಕ್ರಿಕೆಟ್‌ನಂತೆ ಜನಪ್ರಿಯಗೊಳಿಸಬೇಕಿದೆ. ಕ್ರೀಡೆಗಳು ನಮ್ಮನ್ನು ಆರೋಗ್ಯವಾಗಿರುವಂತೆ ಮಾಡುತ್ತವೆ. ಯುವಕರು ತಮ್ಮಲ್ಲಿರುವ ಪ್ರತಿಭೆಯನ್ನು ಹೊರ ತರಲು ಕ್ರೀಡೆಗಳು ಸಹಕಾರಿಯಾಗಿವೆ. ಅದನ್ನು ಸದುಪಯೋಗಪಡಿಸಿಕೊಳ್ಳುವದು ನಿಮ್ಮ ಆದ್ಯ ಕರ್ತವ್ಯವಾಗಲಿ ಎಂದರು.
ಈ ಸಂದರ್ಭದಲ್ಲಿ ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷ ಅಂದಾನಗೌಡ ಪಾಟೀಲ್, ಶರಣಪ್ಪ ಜವಳಗೇರಿ, ಅಂದಾನಗೌಡ ಪಾಯಪ್ಪಗೌಡರ, ವೆಂಕಟೇಶ ಹಳ್ಳಿ,ಶರಣಪ್ಪ ರಟ್ಟಿ, ಪ್ರವೀಣ ಬೈರಗೊಂಡ, ರಾಘು ಕುರಿ, ನವೀನ ಮಾದಿನೂರ, ಕುಮಾರ ಕರಡಿ, ಅಭಿಷೇಕ್ ಪೂಜಾರ, ನವೀನ ಹುಲ್ಲಣ್ಣವರ, ಮಂಜು ಶಿರೂರ, ಸಂಗಪ್ಪ ರೊಟ್ಟಿ, ವೆಂಕರಡ್ಡಿ ಹಳ್ಳಿ, ಪ್ರಕಾಶ ಸೊಬರದ, ಕಾರ್ತಿಕ ಪೂಜಾರ, ನಿಂಗಪ್ಪ ಕಡೆತೋಟದ ಮುಂತಾದವರು ಉಪಸ್ಥಿತರಿದ್ದರು.