ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ : ತಾಲೂಕಿನ ಬೆಳ್ಳಟ್ಟಿ ಬಸ್ ನಿಲ್ದಾಣದಲ್ಲಿಯ ಅವ್ಯವಸ್ಥೆಯನ್ನು ಖಂಡಿಸಿ ಮಂಗಳವಾರ ಕರವೇ ಸ್ವಾಭಿಮಾನಿ ಬಳಗದ ಕಾರ್ಯಕರ್ತರು ರಸ್ತೆ ತಡೆ ನಡೆಸಿ, ಸಾರಿಗೆ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗುತ್ತಾ ಕೆಲಕಾಲ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕರವೇ ತಾಲೂಕಾಧ್ಯಕ್ಷ ವೀರೇಶ ಪಸಾರದ, ಬೆಳ್ಳಟ್ಟಿ ಬಸ್ ನಿಲ್ದಾಣದಲ್ಲಿ ಶೌಚಾಲಯ ನಿರ್ಮಾಣದ ಅವೈಜ್ಞಾನಿಕ ಕಾಮಗಾರಿಯಿಂದ ಟ್ಯಾಂಕ್ ತುಂಬಿ ಗಲೀಜು ನೀರು ರಸ್ತೆಯ ತುಂಬೆಲ್ಲಾ ಹರಿದಾಡುತ್ತಿದೆ. ಸಾರ್ವಜನಿಕರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವುದರ ಜೊತೆಗೆ ರಸ್ತೆಯಲ್ಲಿ ಸಂಚರಿಸುವುದಕ್ಕೂ ಸಹ ಹಿಂಸೆಯಾಗುತ್ತಿದೆ. ಇದನ್ನು ಸರಿಪಡಿಸುವಂತೆ ಹಲವು ಬಾರಿ ಸಾರಿಗೆ ಅಧಿಕಾರಿಗಳಿಗೆ ಹೇಳಿದರೂ ಸಹ ಸ್ಪಂದಿಸಿಲ್ಲ. ಈ ಕೂಡಲೇ ಜಿಲ್ಲಾಮಟ್ಟದ ಅಧಿಕಾರಿಗಳು ಈ ಅವ್ಯವಸ್ಥೆಯನ್ನು ಸರಿಪಡಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕೆಂದು ಆಗ್ರಹಿಸಿದರು.
ಮಂಜು ದೇಸಳ್ಳಿ, ಸೋಹಿಲ್ ನದಾಫ್, ಆನಂದ ಸತ್ಯಮ್ಮನವರ, ಗೌತಮ ಹಳ್ಳೆಮ್ಮನವರ, ಅಣ್ಣಪ್ಪ ಗುತ್ತೆಮ್ಮನವರ, ಕೊಟ್ರೇಶ ಪೂಜಾರ, ಮಾಂತೇಶ ಮಾಳಮ್ಮನವರ ಮುಂತಾದವರು ಉಪಸ್ಥಿತರಿದ್ದರು.