ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಗರ್ಭಿಣಿಯರಿಗೆ ಸರಿಯಾದ ಆಹಾರ ದೊರೆಯದೆ ಇರುವದರಿಂದ ಅಥವಾ ಪೌಷ್ಟಿಕ ಆಹಾರಗಳ ಕೊರತೆಯಿಂದ ಗರ್ಭಿಣಿ/ತಾಯಂದಿರಲ್ಲಿ ರಕ್ತಹೀನತೆ, ಅಪೌಷ್ಟಿಕತೆ ಕಂಡು ಬರುತ್ತದೆ. ಈ ನಿಟ್ಟಿನಲ್ಲಿ ರಾಷ್ಟ್ರೀಯ ಪೋಷಣ ಅಭಿಯಾನದ ಮೂಲಕ ಅಪೌಷ್ಟಿಕತೆಯನ್ನು ತಡೆಯುವ ಉದ್ದೇಶವನ್ನು ಹೊಂದಿದೆ ಎಂದು ತಹಸೀಲ್ದಾರ ವಾಸುದೇವ ಸ್ವಾಮಿ ಹೇಳಿದರು.
ಅವರು ಬಾಲೆಹೊಸೂರಿನ ಗ್ರಾಮದ ಅಂಗನವಾಡಿ ಕೇಂದ್ರ 93ರಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿರಹಟ್ಟಿ ಇವರ ಸಹಯೋಗದಲ್ಲಿ ಪೋಷಣ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಅರೋಗ್ಯದ ಹಿತದೃಷ್ಟಿಯಿಂದ ಇಂತಹ ಪೋಷಣ ಅಭಿಯಾನ ಕಾರ್ಯಕ್ರಮಗಳನ್ನು ಮಾಡಿ ಗರ್ಭಿಣಿ ಸ್ತ್ರೀಯರಲ್ಲಿ ಯಾವ ಸಮಸ್ಯೆಗಳು ಉಂಟಾಗುತ್ತವೆ, ಗರ್ಭಿಣಿಯರು ಯಾವ ಆಹಾರವನ್ನು ಸೇವಿಸಬೇಕು ಎಂದು ತಿಳಿಸುವ ಕಾರ್ಯಕ್ರಮ ಇದಾಗಿದೆ. ಗರ್ಭಿಣಿಯರು ಹಸಿ ತರಕಾರಿಗಳನ್ನು, ಮೊಳಕೆ ಕಾಳುಗಳನ್ನು ಮತ್ತು ಪೌಷ್ಟಿಕಾಂಶ ಹೊಂದಿರುವ ಆಹಾರವನ್ನು ಸೇವಿಸಿ ತಾವು ಮತ್ತು ತಮ್ಮ ಗರ್ಭದಲ್ಲಿರುವ ಮಗುವನ್ನು ಪೋಷಣೆ ಮಾಡಬೇಕು ಎಂದು ಹೇಳಿದರು.
ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಪ್ಪ ಧರ್ಮರ ಮಾತನಾಡಿ, ಮಹಿಳೆಯರು ತಮ್ಮ ಜತೆಗೆ ಮಕ್ಕಳನ್ನೂ ಆರೋಗ್ಯವಂತರನ್ನಾಗಿಸುವ ಮೂಲಕ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು.
ಅಪೌಷ್ಟಿಕತೆ ನಿವಾರಿಸುವಲ್ಲಿ ಕೇಂದ್ರ ಸರ್ಕಾರ ಆಯೋಜಿಸಿರುವ ರಾಷ್ಟ್ರೀಯ ಪೋಷಣ್ ಅಭಿಯಾನ ಒಂದು ಮಹತ್ತರ ಕಾರ್ಯಕ್ರಮವಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ನೆರವೇರಿಸಲಾಯಿತು. ಸಿಡಿಪಿಓ ಮೃತ್ಯುಂಜಯ ಗುಡ್ಡದ ಅನ್ವೇರಿ, ವಲಯ ಮೇಲ್ವಿಚಾರಕಿಯರು, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಇದ್ದರು.