ಬಳ್ಳಾರಿ: ನಟ ದರ್ಶನ್ ಅವರು ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ಬಂಧನಕ್ಕೆ ಒಳಗಾಗಿ ಮೂರು ತಿಂಗಳು ಕಳೆದಿದೆ. ಈವರೆಗೆ ಅವರ ಪರ ವಕೀಲರು ಜಾಮೀನಿಗೆ ಅರ್ಜಿ ಸಲ್ಲಿಕೆ ಮಾಡಿಲ್ಲ. ಒಂದೊಮ್ಮೆ ಅರ್ಜಿ ಸಲ್ಲಿಕೆ ಆದರೂ ಜಾಮೀನು ಸಿಗೋದು ಅಷ್ಟು ಸುಲಭದಲ್ಲಿ ಇಲ್ಲ ಎಂಬ ಅಭಿಪ್ರಾಯ ಇದೆ. ಇದಕ್ಕೆ ಕಾರಣ ಅವರು ಮಾಡಿಕೊಳ್ಳುತ್ತಿರುವ ಎಡವಟ್ಟುಗಳು.
ಇನ್ನೂ ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ ಪಡೆದು ಬಳ್ಳಾರಿ ಜೈಲಿಗೆ ವರ್ಗಾವಣೆಯಾಗಿದ್ದ ಕಿಲ್ಲಿಂಗ್ ಸ್ಟಾರ್ ದರ್ಶನ್‌ಗೆ ಜೈಲಾಧಿಕಾರಿಗಳು ಕ್ಲಾಸ್ ಮಾಡಿದ್ದಾರೆ. ಅಹಂಕಾರ, ದರ್ಪ ತೋರಿಸಿ ಪದೇ ಪದೇ ಅಸಭ್ಯ ವರ್ತನೆ ಮಾಡುತ್ತಿರುವ ದರ್ಶನ್ ಗೆ ಜೈಲಾಧಿಕಾರಿಗಳು ಪಾಠ ಮಾಡಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಜೈಲಿನಲ್ಲಿ ಇರುವಷ್ಟು ದಿನ ಜೈಲು ನಿಯಮಗಳನ್ನು ಪಾಲನೆ ಮಾಡಬೇಕು. ಕೈದಿಗಳಿಗೆ ಶಿಕ್ಷೆ ಜೊತೆಗೆ ನಡವಳಿಕೆ ಸರಿಯಾಗುತ್ತದೆ ಎಂದು ಕೋರ್ಟ್ ಜೈಲಿಗೆ ಕಳುಹಿಸುತ್ತದೆ. ಆದರೆ ನೀವು ಜೈಲಿನ ಶಿಸ್ತನ್ನು ಉಲ್ಲಂಘನೆ ಮಾಡುತ್ತಿದ್ದೀರಿ ಎಂದು ಖಾರವಾಗಿ ಹೇಳಿದ್ದಾರೆ.
ಪದೇ ಪದೇ ಸೌಲಭ್ಯಗಳಿಗಾಗಿ ಸಿಬ್ಬಂದಿಗೆ ಕಿರಿಕಿರಿ ಮಾಡುತ್ತಿದ್ದೀರಿ. ನಾವು ಕಾನೂನು ಪ್ರಕಾರ ಏನು ಸಾಧ್ಯ ಅಷ್ಟು ಮಾತ್ರ ಕೊಡುತ್ತೇವೆ. ಹೆಚ್ಚಿನದು ಬೇಕು ಅಂದರೆ ನ್ಯಾಯಾಲಯಕ್ಕೆ ಅರ್ಜಿ ಹಾಕಿ ಎಂದು ಜೈಲರ್ ಎಚ್ಚರಿಕೆ ನೀಡಿದ್ದಾರೆ ಎಂಬ ವಿಚಾರವನ್ನು ಮೂಲಗಳು ತಿಳಿಸಿವೆ.